ಬೆಂಗಳೂರು,ಜು.6:
ಅಧಿಕಾರ ಹಸ್ತಾಂತರಕ್ಕೆ ತೀರ್ಮಾನ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ವರ್ಗಾವಣೆ ಮಾಡಲು ಸಿದ್ಧತೆ ನಡೆಸಿದೆ ಎಂಬ ವರದಿಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿ ಕಚೇರಿ, ಸಿದ್ದರಾಮಯ್ಯ ಅವರನ್ನು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಕ್ಷದ ಹಿಂದುಳಿದ ವರ್ಗಗಳ ಘಟಕಕ್ಕೆ ಹೊಸ ರೂಪ ನೀಡುವ ದೃಷ್ಟಿಯಿಂದ ಎಐಸಿಸಿ ಸಲಹಾ ಸಮಿತಿಯನ್ನು ರಚನೆ ಮಾಡಿದೆ ಈ ಸಮಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅವಕಾಶ ನೀಡಿದೆ ಬದಲಾಗಿ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಿಲ್ಲ ಎಂದು ತಿಳಿಸಿದೆ.
ಸಲಹಾ ಸಮಿತಿಯ ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಈ ಸಭೆಯಲ್ಲಿ ಸಮಿತಿಯ ಸದಸ್ಯರ ಜೊತೆಗೆ ಹಿಂದುಳಿದ ವರ್ಗಗಳಿಗೆ ಸೇರಿದ ಪಕ್ಷದ ಶಾಸಕರು ಮತ್ತು ಸಂಸದರು ಕೂಡ ಪಾಲ್ಗೊಳ್ಳುತ್ತಿದ್ದಾರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಗೊತ್ತಿಲ್ಲ:
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ತಮಗೆ ಯಾವ ರೀತಿ ಹುದ್ದೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಓಬಿಸಿ ಸಮುದಾಯಗಳ ಸಭೆ ಮಾಡಿ ಎಂದು ಎಐಸಿಸಿಯ ಓಬಿಸಿ ಘಟಕದ ಅಧ್ಯಕ್ಷರು ಸೂಚನೆ ನೀಡಿದರು. ಅದರಂತೆ 15 ರಂದು ಕರ್ನಾಟಕದಲ್ಲಿ ರಾಷ್ಟ್ರೀಯ ಸಭೆ ನಿಗದಿ ಮಾಡಿದ್ದೇನೆ ಎಂದರು.
ಎಐಸಿಸಿ ಹುದ್ದೆ ಕೊಟ್ಟಾಗ ಅದನ್ನು ಬಿಟ್ಟು ಓಡಿಹೋಗಲು ಸಾಧ್ಯವಿಲ್ಲ. ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. ನನ್ನನ್ನು ಸಂಚಾಲಕನನ್ನಾಗಿ ಮಾಡಲಾಗಿದೆಯೋ ಅಥವಾ ಯಾವ ರೀತಿ ಹುದ್ದೆ ನೀಡಿದ್ದಾರೆ ಎಂದು ತಿಳಿಯದೆ ತಾವು ಪ್ರತಿಕ್ರಿಯಿಸುವುದಿಲ್ಲ. ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ. ತಾವು ಯಾವುದೇ ಹುದ್ದೆಯನ್ನೂ ಕೇಳಿರಲಿಲ್ಲ ಎಂದು ಹೇಳಿದರು.
ಹೋಗುವುದಿಲ್ಲ:
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್ ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಸಮಿತಿಗೆ ಸಂಚಾಲಕರನ್ನಾಗಿ ನೇಮಕ ಮಾಡಿದೆ. ಹಾಗೆಂದ ಮಾತ್ರಕ್ಕೆ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ವರ್ಗಾಯಿಸಲಾಗುತ್ತಿದೆ ಎಂದು ವ್ಯಾಖ್ಯಾನಿಸುವುದು ತಪ್ಪು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ ಅವರ ಅಭಿವೃದ್ಧಿ ಕುರಿತಂತೆ ವಿಶೇಷವಾದ ತಿಳುವಳಿಕೆ ಹೊಂದಿದ್ದಾರೆ ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಅವರ ಸೇವೆಯನ್ನು ಬಳಸಿಕೊಳ್ಳಲು ಮುಂದಾಗಿದೆ ಇದಕ್ಕೆ ವಿಶೇಷ ಅರ್ಥ ಕಲ್ಪಸಬೇಕಾಗಿಲ್ಲ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಹುದ್ದೆ ದೊರೆತ ಕೂಡಲೇ ಮುಖ್ಯಮಂತ್ರಿ ಸ್ಥಾನ ತೊರೆಯುತ್ತಾರೆ ಎಂದು ಹೇಳುವುದು ತಪ್ಪು ಹೈಕಮಾಂಡ್ ಆ ರೀತಿ ಯಾವುದೇ ಯೋಚನೆಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸುರ್ಜೇವಾಲ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಪಕ್ಷ ಸಂಘಟನೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚಿಸಲು ಆಗಿಂದಾಗ್ಗೆ ಬೆಂಗಳೂರಿಗೆ ಬರುತ್ತಿರುತ್ತಾರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ತಿಳಿಸಿದರು.
ಹಸ್ತಾಂತರ:
ಈ ನಡುವೆ ಕಾಂಗ್ರೆಸ್ ವಲಯದಲ್ಲಿ ನಡೆದಿರುವ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು ಇದು ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಆರಂಭ ಎಂದು ಬಣ್ಣಿಸಿದ್ದಾರೆ.
ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ ಎಂದು ಹೇಳಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನ ವಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಸಿಎಂ ರಾಜೀನಾಮೆ ಪಡೆಯಲು ಭೂಮಿಕೆ ಸಜ್ಜು ಮಾಡುತ್ತಿದ್ದಾರೆ ಎಂದು ತಿಳಿಸಿದರು
ಸುರ್ಜೇವಾಲ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಸಿದ್ದರಾಮಯ್ಯರನ್ನು ದೆಹಲಿಗೆ ಕಳುಹಿಸಲು ಕಾಂಗ್ರೆಸ್ ನಲ್ಲಿ ವೇದಿಕೆ ಸಿದ್ಧವಾಗಿದೆ. ಸಿದ್ದರಾಮಯ್ಯ ಅವರು ಅತಿ ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಹೇಳಿದರು.
ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದು, ಸದ್ಯದಲ್ಲೇ ಸಿಎಂ ಸ್ಥಾನ ಪಲ್ಲಟ ಆಗುತ್ತದೆ. ಇದಕ್ಕಾಗಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಓಬಿಸಿ ಸಮಿತಿಗೆ ಅಧ್ಯಕ್ಷರಾಗಿ ಮಾಡಿದ್ದಾರೆ. ಇದರ ಅರ್ಥ ಸಿದ್ದರಾಮಯ್ಯ ದೆಹಲಿಗೆ ಶಿಫ್ಟ್ ನಿಶ್ಚಿತ ಎಂದರು.
ಸಿದ್ದರಾಮಯ್ಯ ಅವರನ್ನು ರಾಷ್ಟ್ರರಾಜಕಾರಣಕ್ಕೆ ಕರೆಸಿಕೊಂಡು, ಸಿಎಂ ಖುರ್ಚಿಯಿಂದ ಕೆಳಗಿಳಿಸುವ ಯೋಜನೆ ಇದಾಗಿದೆ. ಪ್ರಮೋಷನ್ ಮಾಡಿ, ಡಿಮೋಷನ್ ಮಾಡುವ ತಂತ್ರಗಾರಿಕೆ ಇದು’ ಎಂದರು.
Previous Articleರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.
Next Article ಸೆಪ್ಟೆಂಬರ್ ಕ್ರಾಂತಿ ನಿಶ್ಚಿತ ಅಂದ್ರು ರಾಜಣ್ಣ