ಬಾಗಲಕೋಟೆ : ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ , ಟಿಕ್ ಟಾಕ್, ಸಂಗೀತದ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಭೀಮಪ್ಪ ಗುರಡಿ (27 ವರ್ಷ)ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಇಂದು ಅವರ ಹೊಸ ಮನೆ ಗೃಹಪ್ರವೇಶ ಆಗಬೇಕಿತ್ತು. ಅದಕ್ಕೂ ಎರಡು ದಿನ ಮುನ್ನವೇ ಅನುಮಾನಾಸ್ಪದವಾಗಿ ತಿಮ್ಮಣ್ಣನ ಮೃತದೇಹ ಸಿಕ್ಕಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶಂಕಿಸಲಾಗಿದೆ. ಅಮಲಝರಿ ಗ್ರಾಮದ ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೂಲತಃ ಅಮಲಝರಿ ಗ್ರಾಮದ ತಿಮ್ಮಣ್ಣ ಎಸ್ಸೆಸ್ಸೆಲ್ಸಿವರೆಗೂ ವ್ಯಾಸಂಗ ಮಾಡಿದ್ರಲ್ಲದೇ, ಈ ಹಿಂದೆ ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೊಟ್ಯಾದಿಪತಿ ಸೀಜನ್ 3 ರಲ್ಲಿ ಭಾಗವಹಿಸಿ 6.40 ಲಕ್ಷ ರೂ ಗೆದ್ದಿದ್ದರು.
ಖೋ ಖೋ ಕ್ರೀಡಾಪಟು ಆಗಿದ್ದಂತಹ ತಿಮ್ಮಣ್ಣ ಗ್ರಾಮದ ಮಕ್ಕಳಿಗೆ ತರಬೇತಿ ಕೊಡುತ್ತಿದ್ದರು ಹಾಸ್ಯ, ಸಂಗೀತದ ಮೂಲಕ ರಂಜಿಸಿ ಟಿಕ್‌ಟಾಕ್‌ನಲ್ಲಿ ಅಭಿಮಾನಿಗಳನ್ನ ಸಹ ಹೊಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗಾಗಿ ಮತ್ತು ಹೊಸ ಮನೆ ಕಟ್ಟಿಸುವ ಸಲುವಾಗಿ 16 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಹೀಗಾಗಿ ಸಾಲ ತೀರಿಸಲಾಗದೇ ಮೂರು ದಿನಗಳ ಹಿಂದೆ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.