ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಕುಟುಂಬಸ್ಥರ ವಿರುದ್ಧ ಮೃತ ವ್ಯಕ್ತಿಯ ಆಸ್ತಿಯನ್ನು ಅಕ್ರಮವಾಗಿ ಬರೆಸಿಕೊಂಡ ಆರೋಪ ಕೇಳಿ ಬಂದಿದ್ದು, ಮೃತನ ಸಹೋದರಿ ಕೊಟ್ಟ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಶಾಸಕರ ಪತ್ನಿ ಚಂದ್ರಕಲಾ, ಪುತ್ರರಾದ ರಘುಚಂದನ್ ಮತ್ತು ದೀಪ್ ಚಂದನ್, ಉದ್ಯಮಿ ನಾಗರಾಜ್, ಸಬ್ರಿಜಿಸ್ಟ್ರಾರ್ ನಾಗರತ್ನ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಏನಿದು ಪ್ರಕರಣ?: ಹೊಳಲ್ಕೆರೆಯ ಎಂ.ಜಿ.ಶ್ರೀಧರ್ ಎಂಬುವವರು ಉದ್ಯಮಿ ನಾಗರಾಜ್ಗೆ ವ್ಯವಹಾರದ ಉದ್ದೇಶದಿಂದ 2016ರಲ್ಲಿ ಜಿಪಿಎ(ಜನರಲ್ ಪವರ್ ಆಫ್ ಅಟಾರ್ನಿ) ನೀಡಿದ್ದರು. ಈ ನಡುವೆ ಶ್ರೀಧರ್ ಅವರ ಸಹೋದರಿ ಲತಾ ಸುಂದರ್ ಎಮಬಾಕೆ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ಕೇಳಿ ಕೋರ್ಟ್ನ ಮೊರೆ ಹೋಗಿದ್ದರು. ಪ್ರಕರಣ ಇತ್ಯರ್ಥವಾಗುವ ಮೊದಲೇ ಶ್ರೀಧರ್ ಅನಾರೋಗ್ಯದಿಂದ ತೀರಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಾಗರಾಜ್, ಶಾಸಕರ ಕುಟುಂಬಕ್ಕೆ ಆಸ್ತಿಯನ್ನು ಮಾರಾಟ ಮಾಡಿಬಿಟ್ಟಿದ್ದಾರೆ.
ಈ ವಿಚಾರ ತಿಳಿದ ಶ್ರೀಧರ್ ಅವರ ಮತ್ತೊಬ್ಬ ಸಹೋದರಿ ಪದ್ಮಜಾ ಅವರು ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಿದ್ದಾರೆ. ಇದರಲ್ಲಿ ಉಪನೋಂದಣಾಧಿಕಾರಿ ನಾಗರತ್ನ ಕೂಡ ಶಾಮೀಲಾಗಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ನಮಗೆ ನ್ಯಾಯ ಕೊಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳ ವಿರುದ್ಧ ಕೇಸ್ ದಾಖಲಿಸುವಂತೆ ಏ.30ರಂದು ಪೊಲೀರಿಗೆ ಸೂಚನೆ ನೀಡಿದ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ. ಕಲಂ 404, 405, 415, 420, 423, 463, 464, 466, 468, 470, ರೆ/ವಿ 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.