ಬೆಂಗಳೂರು,ಡಿ.3-
ಪ್ರಸಕ್ತ ಸಾಲಿನ ಇಂಜಿನಿಯರಿಂಗ್ ಪ್ರವೇಶಕ್ಕೆ ನಡೆದ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕೌನ್ಸೆಲಿಂಗ್ ನಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ.
ಅತಿ ಬೇಡಿಕೆಯುಳ್ಳ ಕೋರ್ಸುಗಳ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧ 10 ಮಂದಿ ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಹಗರಣದ ಕಿಂಗ್ಪಿನ್ ಹರ್ಷ, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಪ್ರಕಾಶ್, ಅವಿನಾಶ್ ಸೇರಿ 10 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಲಾಗಿದೆ..
ಕೆಇಎನಲ್ಲಿ ಕೌನ್ಸೆಲಿಂಗ್ಗೆ ಆಯ್ಕೆಯಾಗಿ ತುಂಬಾ ಬೇಡಿಕೆಯುಳ್ಳ ಕಂಪ್ಯೂಟರ್ ಸೈನ್ ಡೇಟಾ ಸೈನ್ಸ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಷೀನ್ ಲರ್ನಿಂಗ್ ಮೊದಲಾದ ಕೋರ್ಸ್ ಗಳನ್ನು ಪಡೆದುಕೊಂಡು ನಂತರದಲ್ಲಿ ತಾವು ಆಯ್ಕೆ ಮಾಡಿದ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿರಲಿಲ್ಲ.
ಕಾಲೇಜು ಆಯ್ಕೆ ಮಾಡಿಕೊಳ್ಳದವರ ಸೀಟ್ಗಳು ಹಾಗೂ ಸರ್ಕಾರದ ಅಡಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಸೀಟ್ ಪಡೆದು, ದಾಖಲಾತಿ ಪಡೆಯದ ವಿದ್ಯಾರ್ಥಿಗಳ ಸೀಟ್ಗಳನ್ನು ಗ್ಯಾಂಗ್ ಬ್ಲಾಕ್ ಮಾಡುತಿತ್ತು. ಆರೋಪಿಗಳು ಕೆಇಎನ ನೌಕರ ಅವಿನಾಶ್ ಎಂಬುವರ ಸಹಾಯದಿಂದ ಪಾಸ್‌ವರ್ಡ್ ಪಡೆದು ಸೀಟ್ ಬ್ಲಾಕಿಂಗ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ನಂತರ ಲಕ್ಷಾಂತರ ರೂ ಮ್ಯಾನೇಜ್ ಮೆಂಟ್ ಕೋಟಾದಡಿ ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡಲಾಗುತ್ತಿತ್ತು. ಈ ಡೀಲ್ನಲ್ಲಿ ಪ್ರತಿಷ್ಠಿತ ಕಾಲೇಜುಗಳ ಬಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಹಗರಣ ಸಂಬಂಧ ಕೆಇಎ ಆಡಳಿತಾಧಿಕಾರಿ ಇಸಾಲುದ್ದೀನ್ ಜೆ ಗಾಡಿಯಲ್ ನವೆಂಬರ್ 13ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗುತಿದ್ದಂತೆ ಆರೋಪಿ ಪ್ರಕಾಶ್ ತನ್ನ ಲ್ಯಾಪ್ ಟಾಪ್ಗಳನ್ನು ಕಡೂರಿನ ತನ್ನ ಜಮೀನಿನಲ್ಲಿ ಸುಟ್ಟು ಹಾಕಿದ್ದನು. ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Previous Articleಇದಕ್ಕಾಗಿ ಪೊಲೀಸ್ ಪೇದೆ ಅಮಾನತು.
Next Article ೭೨ ವರ್ಷದ ವ್ಯಕ್ತಿಗೆ ಮೋಸಮಾಡಿ ಕೊಂದ ಮಹಿಳೆ!