ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಕ್ರಮ ನಿವೇಶನ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಮತ್ತೊಂದು ದೊಡ್ಡ ಭೂ ಹಗರಣ ಬೆಳಕಿಗೆ ಬಂದಿದೆ.
ಇದರಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಸ್ತಿತ್ವದಲ್ಲಿಯೇ ಇಲ್ಲದ ವ್ಯಕ್ತಿಯ ಹೆಸರಿನಲ್ಲಿ ಅರ್ಜಿ ಪಡೆದು ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿ ಡಿ ನೋಟಿಫೈ ಮಾಡಲಾಗಿದೆ ಎಂದು ಮಂತ್ರಿಗಳಾದ ಕೃಷ್ಣ ಬೈರೇಗೌಡ ಸಂತೋಷ್ ಲಾಡ್ ದಿನೇಶ್ ಗುಂಡೂರಾವ್ ಮತ್ತು ಹಲವು ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಹಲವರು ದಾಖಲೆ ಬಿಡುಗಡೆ ಮಾಡಿದರು.
ಬೆಂಗಳೂರಿನ ಮಠದ ಹಳ್ಳಿ ಗಂಗೇನಹಳ್ಳಿ ಬಡಾವಣೆ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ ನಲ್ಲಿ 1.11 ಎಕರೆ ಜಮೀನು ಬಿಡಿಎ ಭೂಸ್ವಾಧಿನ ಮಾಡಿಕೊಂಡಿರುತ್ತದೆ.1978 ಕ್ಕೆ ಸಂಪೂರ್ಣ ಭೂಸ್ವಾಧೀನ ಮುಗಿದು ಹೋಗಿರುತ್ತದೆ.
ಆದರೆ, 22.08.2007ಈ ಭೂಮಿಯನ್ನು ಡಿನೋಟಿಫೈ ಮಾಡಬೇಕು. ನಮ್ಮ ಕುಟುಂಬ ಸದಸ್ಯರಲ್ಲ ಸೇರಿ ಈ ಭೂಮಿಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ರಾಜಶೇಖರಯ್ಯ ಎನ್ನುವವರು ಅರ್ಜಿ ಸಲ್ಲಿಸುತ್ತಾರೆ. ಆಗ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಡಿ ನೋಟಿಫೈ ಮಾಡಲು ಸೂಚನೆ ನೀಡುತ್ತಾರೆ ಎಂದು ಆಪಾದಿಸಿದರು.
ವಾಸ್ತವವಾಗಿ ಡಿ ನೋಟಿಫೈ ಮಾಡಲು ಅರ್ಜಿ ಸಲ್ಲಿಸಿದ ವ್ಯಕ್ತಿಗೂ ಬಿಡಿಎ ಸ್ವಾಧೀನಪಡಿಸಿಕೊಂಡ ಭೂಮಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಸಂಬಂಧವಿಲ್ಲದ ವ್ಯಕ್ತಿ ಸಲ್ಲಿಸಿದ ಅರ್ಜಿಗೆ ಅಂದಿನ ಮುಖ್ಯಮಂತ್ರಿ, ಕುಮಾರಸ್ವಾಮಿ ಮಾನ್ಯತೆ ನೀಡಿರುವ ವಿಷಯ ಆಶ್ಚರ್ಯ ಮೂಡಿಸಿದೆ ಎಂದು ಹೇಳಿದರು.
ಈ ಭೂಸ್ವಾಧೀನ ಆಗಿರುವ ಭೂಮಿಯ ನಿಜವಾದ ಮಾಲೀಕರಾದ 21 ಜನರ ಜೊತೆಗೆ ಕುಮಾರಸ್ವಾಮಿ ಅವರ ಅತ್ತೆ ಜಿಪಿಎ ಮಾಡಿಕೊಂಡಿದ್ದಾರೆ. ಆದರೆ ಈ ಭೂಮಿ ಡಿ ನೋಟಿಫೈ ಆಗುವ ವೇಳೆಗೆ ಕುಮಾರಸ್ವಾಮಿ ರವರ ಸರ್ಕಾರ ಪತನವಾಗುತ್ತದೆ
ಇದಾದ ಬಳಿಕ ಚುನಾವಣೆ ನಡೆದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.
ಆಗ ಮತ್ತೊಮ್ಮೆ ಈ ಕಡತಕ್ಕೆ ಜೀವ ಬರುತ್ತದೆ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ಕಡತವನ್ನು ಮಂಡಿಸಿ ಡಿ ನೋಟಿಫೈ ಮಾಡುವಂತೆ ಸೂಚಿಸುತ್ತಾರೆ.
ಆದರೆ,ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಜ್ಯೋತಿ ರಾಮಲಿಂಗಂ ಅವರು ಈ ಪ್ರಕರಣ ಡಿ ನೋಟಿಫಿಕೇಶನ್ ಗೆ ಅರ್ಹವಲ್ಲ ಎಂದು ಷರಾ ಬರೆಯುತ್ತಾರೆ. ಅಧಿಕಾರಿಗಳ ಎಲ್ಲಾ ಸೂಚನೆಗಳನ್ನು ಗಾಳಿಗೆ ತೂರಿದ ಯಡಿಯೂರಪ್ಪ ಅವರು ಈ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು 2009 ರಲ್ಲಿ ತಮ್ಮ ಕೈಯಾರೇ ಬರೆಯುತ್ತಾರೆ. ಈ ಮೂಲಕ ಅನಾಮಧೇಯ ವ್ಯಕ್ತಿಯ ಅರ್ಜಿಯ ಮೇರೆಗೆ ಭೂಮಿ ಡಿ ನೋಟಿಫೈ ಆಗುತ್ತದೆ ಎಂದು ವಿವರಿಸಿದರು.
ಡಿನೋಟಿಫಿಕೇಷನ್ ಆದ ಜಮೀನು ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಅವರ ಭಾಮೈದನ ಹೆಸರಿಗೆ ರಿಜಿಸ್ಟರ್ ಆಗುತ್ತದೆ. ಈ ಭೂಮಿ ಮೊದಲಿಗೆ ಸತ್ತವರಿಂದ ಕುಮಾರಸ್ವಾಮಿ ಅವರ ಅತ್ತೆಯ ಹೆಸರಿಗೆ ಜಿಪಿಎ ಆಗುತ್ತದೆ, ಆನಂತರ ಭಾಮೈದನ ಹೆಸರಿಗೆ ರಿಜಿಸ್ಟರ್ ಆಗುತ್ತದೆ. ಇಡೀ ಪ್ರಕ್ರಿಯೆ ದೊಡ್ಡ ಗೋಲ್ಮಾಲ್ ಆಗಿದೆ ಎಂದು ಸಚಿವರು ಆಪಾದಿಸಿದರು.
ಈ ಅಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗುತ್ತದೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ ತನಿಖೆ ಆರಂಭಿಸುತ್ತಾರೆ ತಕ್ಷಣವೇ ಯಡಿಯೂರಪ್ಪ ಅವರು ಇದರ ವಿರುದ್ಧ ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಯಡಿಯೂರಪ್ಪ ಅವರಿಗೆ 25,000 ದಂಡ ವಿಧಿಸಿ ಲೋಕಾಯುಕ್ತ ತನಿಖೆ ಮುಂದುವರಿಸಲು ಆದೇಶಿಸಿದೆ ಎಂದು ಪ್ರಕರಣದ ವಿಚಾರವನ್ನು ಎಳೆ ಎಳೆಯಾಗಿ ವಿವರಿಸಿದರು.
ಆದರೆ ಹೈಕೋರ್ಟ್ ಆದೇಶ ಬಂದ ನಂತರವೂ ಲೋಕಾಯುಕ್ತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿಲ್ಲ ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕೂಡಲೇ ಪ್ರಕರಣದ ಗಂಭೀರತೆಯನ್ನು ಅರಿತು ತನಿಖೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಭೂಮಿಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಅನೇಕ ವಿಚಾರಗಳು ಚರ್ಚೆಯಾಗುತ್ತಿವೆ. ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಅನೇಕ ಸುಳ್ಳು ಆರೋಪಗಳನ್ನು ಮಾಡಿ, ಒಂದೇ ಸುಳ್ಳನ್ನು ಮೂರು ಬಾರಿ ಹೇಳಿ ಅದನ್ನೆ ನಿಜ ಎಂದು ಜನರಿಗೆ ನಂಬಿಸುವ ಕೆಲಸ ಆಗುತ್ತಿದೆ. ಆದರೆ ನಿಜವಾದ ಭೂಕಬಳಿಕೆಯ ಬಗ್ಗೆ ತನಿಖಾ ಸಂಸ್ಥೆಗಳು ನಿಷ್ಪಕ್ಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು
ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಹೋಗುವ ತನಕ ಇದನ್ನು ಫಾಲೋ ಅಪ್ ಮಾಡುತ್ತಲೆ ಇರುತ್ತಾರೆ. ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ತಾಯಿಗೂ ಈ ಜಮೀನಿಗೂ ಸಂಬಂಧವೇ ಇಲ್ಲ. ಆದರೂ ಅವರ ಹೆಸರಿಗೆ 20 ದಿನಗಳಲ್ಲಿ ಜಿಪಿಎ ಆಗುತ್ತದೆ. ಇದು ನಿಜವೊ ಸುಳ್ಳೋ ಎಂದು ಮಾನ್ಯ ಕುಮಾರಸ್ವಾಮಿಯವರೇ ಹೇಳಬೇಕು ಎಂದರು.
ಕುಮಾರಸ್ವಾಮಿ ಅವರ ಅತ್ತೆ ವಿಮಲಾ ಅವರು ತಮ್ಮ ಮಗನಾದ ಚಂದ್ರಪ್ಪ ಅವರಿಗೆ ಮಾರಾಟ ಮಾಡಿರುವುದು ನಿಜವೋ ಸುಳ್ಳೋ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು.
ಈ ಹಗರಣದಲ್ಲಿ ಯಡಿಯೂರಪ್ಪ ಅವರು ಹಾಗೂ ಕುಮಾರಸ್ವಾಮಿ ಅವರು ಎಷ್ಟು ಪಾಲು ಮಾಡಿಕೊಂಡಿದ್ದಾರೆ ಎಂದು ಹೇಳಬೇಕು. ಇದರ ಬಗ್ಗೆ ಇಬ್ಬರೂ ಸ್ಪಷ್ಟವಾದ ಉತ್ತರಗಳನ್ನು ನೀಡಬೇಕು ಎಂದು ಆಗ್ರಹಿಸಿದರು
ಸಚಿವ ಸಂತೋಷ್ ಲಾಡ್ ಮಾತನಾಡಿ ಈ ಹಗರಣದ ಮುಖ್ಯ ರೂವಾರಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಉತ್ತರ ಕೊಡಬೇಕು. ಮುಖ್ಯವಾಗಿ ಬಿಜೆಪಿಯವರು ನಾವು ಬಿಡುಗಡೆ ಮಾಡುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ನೀಡಿ ಮತ್ತೊಮ್ಮೆ ತನಿಖೆಗೆ ಆದೇಶಿಸಿ ಎಂದು ಅವರಲ್ಲಿ ಮನವಿ ಮಾಡಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ತನಿಖೆ ನಡೆಸಿ ಎಂದು ರಾಜ್ಯಪಾಲರಿಗೆ ಪತ್ರ ಬರೆಯಬೇಕು ಎಂದು ಹೇಳಿದರು
.