ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಇಸ್ರೇಲ್ ಮತ್ತು ಅಮೆರಿಕದ ಜಂಟಿ ಪಡೆಗಳು ಇರಾನ್ ಮೇಲೆ ನಡೆಸುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಇಡೀ ಪ್ರದೇಶವನ್ನು ನಡುಗಿಸಿದೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಅಮೆರಿಕದ ಸುಮಾರು 200 ಯುದ್ಧ ವಿಮಾನಗಳು ಮತ್ತು ಎರಡು ಬೃಹತ್ ಯುದ್ಧ ನೌಕೆಗಳು ಭಾಗಿಯಾಗಿದ್ದು, ಇರಾನ್‌ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸಲು ಸತತ ಬಾಂಬ್ ದಾಳಿ ನಡೆಸುತ್ತಿವೆ.
ಈ ಕಾರ್ಯಾಚರಣೆಯು 2003ರಲ್ಲಿ ನಡೆದ ಇರಾಕ್ ಯುದ್ಧದ ಮೊದಲ ದಿನದ ದಾಳಿಗಿಂತಲೂ ದುಪ್ಪಟ್ಟು ವೇಗ ಮತ್ತು ತೀವ್ರತೆಯನ್ನು ಹೊಂದಿದೆ ಎಂದು ಅಮೆರಿಕದ ಮಿಲಿಟರಿ ಕಮಾಂಡರ್‌ಗಳು ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕಾರ್ಯಾಚರಣೆಯ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಇರಾನ್‌ನ ನೌಕಾಪಡೆ, ವಾಯುಪಡೆ ಮತ್ತು ಅವರ ಪ್ರಮುಖ ರೇಡಾರ್ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ.
ಇರಾನ್‌ನ ಸುಮಾರು 17 ಹಡಗುಗಳನ್ನು ಅಮೆರಿಕದ ಪಡೆಗಳು ಹೊಡೆದುರುಳಿಸಿವೆ. ಹೊಸ ಉಪಗ್ರಹ ಚಿತ್ರಗಳ ಪ್ರಕಾರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿವಾಸ ಹಾಗೂ ಅಧ್ಯಕ್ಷರ ಸಂಕೀರ್ಣದ ಮೇಲೆ ದಾಳಿಯಾದ ಕುರುಹುಗಳು ಕಂಡುಬಂದಿವೆ. ಇದರ ಜೊತೆಗೆ ತೆಹ್ರಾನ್‌ನಲ್ಲಿರುವ ಇರಾನ್‌ನ ಗುಪ್ತಚರ ಸಚಿವಾಲಯ, ನ್ಯಾಯಾಂಗ ಸಂಕೀರ್ಣ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕೇಂದ್ರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಲಾಗಿದೆ.
ಈ ವಿನಾಶಕಾರಿ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಬೃಹತ್ ಮಟ್ಟದ ಪ್ರತಿಕಾರಕ್ಕೆ ಮುಂದಾಗಿದೆ. ಇರಾನ್ ಪಡೆಗಳು ಸುಮಾರು 500 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 2,000 ಡ್ರೋನ್‌ಗಳನ್ನು ಇಸ್ರೇಲ್ ಹಾಗೂ ಅಮೆರಿಕದ ನೆಲೆಗಳ ಮೇಲೆ ಉಡಾಯಿಸಿವೆ. ಈ ದಾಳಿಯು ಕೇವಲ ಇಸ್ರೇಲ್‌ಗೆ ಸೀಮಿತವಾಗದೆ ಪಶ್ಚಿಮ ಏಷ್ಯಾದಾದ್ಯಂತ ಹರಡಿದ್ದು, ದುಬೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಸಮೀಪ ಡ್ರೋನ್ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ರಿಯಾದ್ ಮತ್ತು ಕುವೈತ್ ಸಿಟಿಯಲ್ಲಿರುವ ಅಮೆರಿಕದ ಕಚೇರಿಗಳ ಮೇಲೆಯೂ ದಾಳಿ ನಡೆದ ಹಿನ್ನೆಲೆಯಲ್ಲಿ, ವಾಷಿಂಗ್ಟನ್ ತನ್ನ ರಾಜತಾಂತ್ರಿಕರನ್ನು ತಕ್ಷಣವೇ ಅಲ್ಲಿಂದ ತೆರವುಗೊಳಿಸಲು ಆದೇಶಿಸಿದೆ.
ಪ್ರಸ್ತುತ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಅಮೆರಿಕದ ಪಡೆಗಳು ಗಂಭೀರವಾಗಿ ಹಾನಿಗೊಳಿಸಿದ್ದರೂ, ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಿರಂತರವಾಗಿ ಮುಂದುವರಿದಿವೆ. ಇಡೀ ಪಶ್ಚಿಮ ಏಷ್ಯಾ ಈಗ ಅಕ್ಷರಶಃ ಯುದ್ಧ ಭೂಮಿಯಾಗಿ ಮಾರ್ಪಟ್ಟಿದ್ದು, ಅಮೆರಿಕವು ಈ ಭಾಗದಲ್ಲಿ ತನ್ನ ಸೈನ್ಯದ ಬಲವನ್ನು ದಶಕದಲ್ಲೇ ಕಾಣದಷ್ಟು ಹೆಚ್ಚಿಸಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಈ ನೇರ ಸಂಘರ್ಷವು ಮುಂದಿನ ದಿನಗಳಲ್ಲಿ ವಿಶ್ವದ ಆರ್ಥಿಕತೆ ಮತ್ತು ರಾಜಕೀಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.

