ಬೆಂಗಳೂರು
ಅರಮನೆಯಂಥ ವಿಲಾಸಿ ಭವನದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಜಮೀರ್ ಅಹಮದ್ ಖಾನ್ (B.Z Zameer Ahmed Khan) ಅವರೇ, ನಿಮ್ಮದೇ ಕ್ಷೇತ್ರದ ಗೋರಿಪಾಳ್ಯ, ಪಾದರಾಯನಪುರದ ಬಡ ಮುಸ್ಲಿಮರು ಎಂಥ ಕಷ್ಟದ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಗೊತ್ತಾ ಎಂದು JDS ಪ್ರಶ್ನಿಸಿದೆ.
ಇತ್ತೀಚೆಗೆ JDS ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ Congress ನಾಯಕ ಜಮೀರ್ ಅಹಮದ್ ಖಾನ್ ವಿರುದ್ಧ ಟ್ವಿಟರ್ ನಲ್ಲಿ ಕೆಂಡಕಾರಿರುವ ಜೆಡಿಎಸ್,ಕಾಮಾಲೆ ಕಣ್ಣಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಹಾಕುವ ನಿಮಗೆ ಮುಸ್ಲಿಮರ ನೈಜಸ್ಥಿತಿಯ ಬಗ್ಗೆ ಅರಿವಿದೆಯಾ' ಎಂದು ಪ್ರಶ್ನಿಸಿದೆ.
ಹರಕಲು ನಾಲಿಗೆಯ ಜಮೀರ್, ಮುಸ್ಲಿಂ ಸಮುದಾಯಕ್ಕೆ ಸೇರಿದ ನಿಮಗೆ ರಾಜಕೀಯ ಜನ್ಮಕೊಟ್ಟಿದು ಇದೇ ಕುಮಾರಣ್ಣ. ವಿಧಾನಸಭೆಯ ಮಾರ್ಷಲ್‌ಗಳು ಕುತ್ತಿಗೆಪಟ್ಟಿ ಹಿಡಿದು ಹೊರದಬ್ಬಿದಾಗ ಇದೇ ಕುಮಾರಣ್ಣ ನಿಮ್ಮ ಮಾನ ಕಾಪಾಡಿದ್ದು. ಅಂದು ಶಪಥಗೈದ ಕುಮಾರಣ್ಣ ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದು ನೆನಪಿಲ್ಲವೇ? ನಿಯತ್ತಿಲ್ಲದ ನಿಮಗೆ ಇದೆಲ್ಲಾ ಅರ್ಥವಾದೀತೆ? ಎಂದು ಕೇಳಿದೆ. ಜಮೀರ್ ಅಹಮದ್ ಅವರಿಗೆ ನಾಲಗೆಯ ಮೇಲೆ ಸದಾ ಕಂಡವರ ಎಂಜಲು ಚಪ್ಪರಿಸುವ ಅಭ್ಯಾಸವಿದೆ. ಮುಸ್ಲಿಂ ಸಮುದಾಯದವರಿಗೆ ಅವರೇ ದೊಡ್ಡ ಶತ್ರು,ಉಂಡ ಮನೆಯ ಗಳ ಇರಿಯುವ ಜಮೀರ್ ಎಂದು ದೂರಿದೆ.
ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಮುಗಿಸಲು ಹೊರಟಿದ್ದು ಸುಳ್ಳಾ? ನಿಮ್ಮ ರೀತಿ ಇಬ್ರಾಹಿಂ (C M Ibrahim) ಅವರು ರಾಜಕೀಯದಲ್ಲಿ ಸಭ್ಯತೆಯ ಎಲ್ಲೆ ಮೀರಿದವರಲ್ಲ. ಆದರೆ, ಸಭ್ಯತೆಯ ಗಂಧಗಾಳಿ ಗೊತ್ತಿಲ್ಲದ ನಿಮಗೆ ರಾಜಕೀಯ ಜನ್ಮಕೊಟ್ಟ ಮಾತೃಪಕ್ಷದ ಬಗ್ಗೆ ಇರುವ ಮತ್ಸರ ನಿಮ್ಮ ಕೊಳಕು ಮನಃಸ್ಥಿತಿಗೆ ಹಿಡಿದ ಕನ್ನಡಿ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.