ಹಾವೇರಿ,ಫೆ.27-
ಏಲಕ್ಕಿ ನಾಡು ಹಾವೇರಿ ಜಿಲ್ಲೆಯ ಅನ್ನದಾತರ ನಿದ್ದೆಗೆಡಿಸಿದ್ದ ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ದಾದಾಪೀರ್ ಕಡೇಮನಿ (35), ಜುಬೇರ್ (25), ಅಬ್ದುಲ್ ಸತ್ತರ್(38), ಪಾರೂಕ್ (23) ಮತ್ತು ಅಕ್ರಂ ಅಲಿ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ 7 ಲಕ್ಷ 50 ಸಾವಿರ ರೂ ಮೌಲ್ಯದ ಮೂರು ಎತ್ತುಗಳು ಮತ್ತು ಬೊಲೆರೋ ವಾಹನಗಳನ್ನು ಜಪ್ತಿ ಮಾಡಲಾಗಿದೆ.ಇವರು ಕದ್ದ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ
ಫೆಬ್ರವರಿ 22 ರಂದು ಆರೋಪಿಗಳು ಶಿಗ್ಗಾಂವಿ ತಾಲೂಕಿನ ಕಲ್ಯಾಣ ಗ್ರಾಮದಲ್ಲಿ ಒಂದು ಎತ್ತನ್ನು ಕಳ್ಳತನ ಮಾಡಿದ್ದರು. ಅಲ್ಲದೇ ಅಗಡಿ ಗ್ರಾಮದಲ್ಲಿ ಎರಡು ಎತ್ತುಗಳನ್ನು ಕದ್ದು ಪರಾರಿಯಾಗಿದ್ದ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಪ್ರಕರಣದ ಬೆನ್ನು ಬಿದ್ದ ಪೊಲೀಸರು, ಬುಧವಾರ ಸಂಜೆ ಆರು ಗಂಟೆಗೆ ಬಾಡದ ಅರಮನೆ ಬಳಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಜಾನುವಾರುಗಳ ಕಳ್ಳತನ ಮಾಡಿರುವ ವಿಷಯ ಬಾಯಿ ಬಿಟ್ಟಿದ್ದಾರೆ.
ರಾತ್ರೋರಾತ್ರಿ ಎತ್ತುಗಳ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವುದು ಹಾವೇರಿ ಜಿಲ್ಲೆಯ ರೈತರಿಗೆ ಸಮಾಧಾನ ತಂದಿದೆ.
ಮನೆಯ ಬಯಲಿನಲ್ಲಿ ಕಟ್ಟುತ್ತಿದ್ದ ರೈತರ ಜಾನುವಾರುಗಳನ್ನೇ ಇವರು ಟಾರ್ಗೆಟ್ ಮಾಡುತ್ತಿದ್ದರು. ರಾತ್ರಿ ಯಾರಿಗೊ ಗೊತ್ತಾಗದಂತೆ ಕ್ಯಾಪ್ ಹಾಕಿಕೊಂಡು ಬಂದು ಜಾನುವಾರು ಕಳ್ಳತನ ಮಾಡುತ್ತಿದ್ದರು. ಈ ಕುರಿತಂತೆ ಹಾವೇರಿ ಜಿಲ್ಲೆಯಲ್ಲಿ ಹಲವು ರೈತರು ಪೊಲೀಸರಿಗೆ ದೂರು ನೀಡಿದ್ದರು.
ಕೆಲವು ರೈತರು ಲಕ್ಷಾಂತರ ರೂ ಮೌಲ್ಯದ ಎತ್ತುಗಳನ್ನು ಕಳೆದುಕೊಂಡು, ಕಂಗಾಲಾಗಿದ್ದರು. ಇನ್ನು ಈ ಆರೋಪಿಗಳು ಕಟ್ಟುಮಸ್ತಾದ ಜಾನುವಾರುಗಳನ್ನು ಹೆಚ್ಚಿನ ಬೆಲೆಗೆ ಬೇರೆ ರೈತರಿಗೆ ಮಾರಾಟ ಮಾಡುತ್ತಿದ್ದರು. ಸಣಕಲು ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ
Previous Articleಚಲಿಸುತ್ತಿರುವ ಬೈಕ್ ಮೇಲೆ ಸರಸ
Next Article ಕ್ಷಿಪ್ರ ರಾಜಕೀಯ ಬೆಳವಣಿಗೆಯ ಭವಿಷ್ಯ