ಮಂಗಳೂರು(ದಕ್ಷಿಣ ಕನ್ನಡ): ಏಕಲವ್ಯ ಪ್ರಶಸ್ತಿ ಪುರಸ್ಕೃತ, ವಿಶ್ವಕಪ್ ವಿಜೇತ ಭಾರತ ಕಬಡ್ಡಿ ತಂಡದ ಆಟಗಾರ ಉದಯ್ ಚೌಟ (46) ಶುಕ್ರವಾರ ಕೊನೆಯುಸಿರೆಳೆದರು. ಅನಾರೋಗ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದರು. ಅವರಿಗೆ ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಬ್ಯಾಂಕ್ ಆಫ್ ಬರೋಡಾದ ಸುರತ್ಕಲ್ ಕಚೇರಿಯಲ್ಲಿ ಉಪಪ್ರಬಂಧಕರಾಗಿ ಉದಯ್ ಚೌಟ ಕಾರ್ಯನಿರ್ವಹಿಸುತ್ತಿದ್ದರು. ಮಾಣಿಯ ಬದಿಗುಡ್ಡೆ ನಿವಾಸಿಯಾಗಿದ್ದ ಉದಯ್ 2007ರ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಇರಾನ್ ತಂಡವನ್ನು 29-19ರ ಅಂತರದಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರಿಗೆ ಅತ್ಯುತ್ತಮ ಆಟಗಾರ ಪ್ರಶಸ್ತಿ ಲಭಿಸಿತ್ತು.
ಕಬಡ್ಡಿಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದರು. ಜ್ಯೂನಿಯರ್ ನ್ಯಾಷನಲ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಅವರು, 2000ದಿಂದ 2008ರವರೆಗೆ ರಾಷ್ಟ್ರೀಯ ಕಬಡ್ಡಿ ತಂಡದಲ್ಲಿದ್ದರು.
ಏಕಲವ್ಯ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಕಬಡ್ಡಿ ಆಟಗಾರರಾಗಿದ್ದ ಉದಯ್, 2004ರಲ್ಲಿ ಭಾರತ, ಬಾಂಗ್ಲಾ ಟೆಸ್ಟ್ ಕಬಡ್ಡಿ ಟೂರ್ನಿಯಲ್ಲಿ 5 ಪಂದ್ಯಗಳನ್ನು ಗೆದ್ದು ಚಿನ್ನದ ಪದಕ ಗಳಿಸಿದ್ದರು.