ಬೆಂಗಳೂರು,ಜೂ.5-
ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಮತ್ತು ಕಾಂಗ್ರೆಸ್ ನಾಯಕರ ಆಂತರಿಕ ಕಲಹದಿಂದಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತಾಯಿತು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದವರು, ಚುನಾವಣೆಯ ನಾಯಕತ್ವ ವಹಿಸಿದವರು ಕೆ.ಎಚ್.ಮುನಿಯಪ್ಪ ಕೋಲಾರ ಚುನಾವಣೆಗೆ ಬರಬಾರದು ಎಂದು ಹಠ ಹಿಡಿದವರು ಚುನಾವಣೆ ಸೋಲಿನ ಹೊಣೆಗಾರಿಕೆಯನ್ನು ಹೊರಬೇಕಿದೆ ಎಂದು ತಿಳಿಸಿದರು.
30 ವರ್ಷ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಫಲಿತಾಂಶ ನೋವು ತಂದಿದೆ. ಮುಂದೆ ಇದನ್ನು ಸರಿಪಡಿಸಬೇಕು. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಗೆಲ್ಲಲೇಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗುಂಪುಗಾರಿಕೆಯನ್ನು ಸರಿಪಡಿಸಲು ರಾಜ್ಯ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಜೆಡಿಎಸ್-ಬಿಜೆಪಿಯ ಮೈತ್ರಿ ಹಿನ್ನೆಲೆಯಲ್ಲಿ ನಾವು ಹೊಸ ಚಿಂತನೆ ಮಾಡಬೇಕು, ಕಾಂಗ್ರೆಸ್‌ನಲ್ಲಿದ್ದು ಕಾಂಗ್ರೆಸ್ ಪಕ್ಷವನ್ನೇ ಸೋಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೇ ಅವರಿಗೆ ಬುದ್ಧಿ ಹೇಳಬೇಕಿದೆ ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನಲ್ಲಿ ಜನರಿಗೆ ಒಗ್ಗಟ್ಟಿನ ಸಂದೇಶ ರವಾನಿಸಲು ವೈಫಲ್ಯಗಳಾದವು. ತಾವು ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚಿಸಿ ಸಾಕಷ್ಟು ಪ್ರಯತ್ನ ಮಾಡಿದ್ದೆ. ಆದರೆ ಕೆಲವರು ಕಾಂಗ್ರೆಸ್ ಪಕ್ಷ ಮುಗಿದು ಹೋದರೂ ಸರಿ, ರಾಜಿಯಾಗುವುದು ಬೇಡ ಎಂದು ನಿರ್ಧಾರ ಮಾಡಿಕೊಂಡಂತಿದೆ. ಹಾಗಾಗಿ ಇಂತಹ ಫಲಿತಾಂಶ ಬಂದಿದೆ ಎಂದು ಹೇಳಿದರು
ಲೋಕಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಎಲ್ಲಿಯೂ ಚರ್ಚೆಯಾಗಿಲ್ಲ. ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಫಲಿತಾಂಶದಲ್ಲಿ ಗೆಲುವಿನ ಸಂಖ್ಯೆಯಲ್ಲಿ ಹಿನ್ನಡೆಯಾಗಿದ್ದರೂ ಮತಗಳಿಕೆ ಹೆಚ್ಚಾಗಿದೆ. ಹೀಗಾಗಿ ಸಚಿವರ ತಲೆದಂಡದ ಪ್ರಶ್ನೆ ಇಲ್ಲ ಎಂದು ಹೇಳಿದರು.
Previous Articleಇನ್ನು ಮುಂದೆ ಹೇಗಂದರೆ ಹಾಗೆ ಮರ ಕಡಿಯುವಂತಿಲ್ಲ.
Next Article ಫಲಿತಾಂಶ ಸಂತೋಷ ತಂದಿಲ್ಲ ಆದರೆ ಸಮಾಧಾನವಾಗಿದೆ.