ಬೆಂಗಳೂರು,ನ.26:
ಅಧಿಕಾರ ಹಸ್ತಾಂತರ ವಿಚಾರವಾಗಿ ಸದ್ದಿಲ್ಲದೆ ಕಾರ್ಯತಂತ್ರ ನಡೆಸುತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಹೈಕಮಾಂಡ್ ನತ್ತ ಬೆರಳು ತೋರಿಸುತ್ತಲೇ ಶಾಸಕರು ಸಚಿವರ ಬೆಂಬಲ ಕ್ರೂಡೀಕರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತುಕತೆ ನಡೆಸಿದ ನಂತರ ಶಿವಕುಮಾರ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಇದಕ್ಕೂ ಮೊದಲು ಅವರು ಕಾಂಗ್ರೆಸ್ ಕಾರ್ಯಕರ್ತರ ಸಮಿತಿ ಸದಸ್ಯ ಹಾಗೂ ಹಿರಿಯ ಮಂತ್ರಿ ಕೆ.ಜೆ. ಜಾರ್ಜ್ ಅವರ ಜೊತೆ ಮಾತುಕತೆ ನಡೆಸಿದ್ದರು ಈ ಮೂವರು ಮಂತ್ರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.
ಅದರಲ್ಲೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗಾಗಿ ಪಟ್ಟು ಹಿಡಿದಿರುವ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರ ಜೊತೆ ಡಿಕೆ ಶಿವಕುಮಾರ್ ನಡೆಸಿರುವ ಮಾತುಕತೆ ಗಮನ ಸೆಳೆದಿದೆ.
ಈ ಮಾತುಕತೆಯ ಸಮಯದಲ್ಲಿ ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಕುರಿತು ತಾವು ಮುಖ್ಯಮಂತ್ರಿಯಾಗಲು ನನಗೆ ನಿಮ್ಮ ಸಹಕಾರ ಬೇಕಾಗಿದೆ ನಾನು ಮುಖ್ಯಮಂತ್ರಿಯಾದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯಲಿದ್ದು ಆ ಹುದ್ದೆಗೆ ನಿಮ್ಮನ್ನು ನೇಮಿಸುವಂತೆ ಹೈಕಮಾಂಡಿಗೆ ಮನವಿ ಮಾಡುತ್ತೇನೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ತಾವು ಮುಖ್ಯಮಂತ್ರಿ ಯಾಗಿ ರಾಜ್ಯದ ಆಡಳಿತದ ಕಡೆ ಗಮನಹರಿಸಿದರೆ ನೀವು ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಕಡೆ ಗಮನಹರಿಸುವ ಮೂಲಕ ಪಕ್ಷ ಮತ್ತು ಸರ್ಕಾರಕ್ಕೆ ಹೊಸ ವರ್ಚಸ್ಸು ತಂದು ಕೊಡಬಹುದಾಗಿದೆ. ಇದಕ್ಕಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಜಾರಕಿಹೊಳಿ ಅವರು ಈ ವಿಷಯದಲ್ಲಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿರುವುದಾಗಿ ತಿಳಿದು ಬಂದಿದೆ
Previous Articleಮುರುಘಾ ಶ್ರೀಗಳಿಗೆ ಕೋರ್ಟ್ ರಿಲೀಫ್!
Next Article ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳ್ಳಭಟ್ಟಿ ತಯಾರಿಕೆ.

