ಬೆಂಗಳೂರು
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ಒಂಬತ್ತು ವಿಶ್ವವಿದ್ಯಾಲಯಗಳನ್ನು ವಿದ್ಯಾರ್ಥಿಗಳ ಕೊರತೆ ಮತ್ತು ಆರ್ಥಿಕ ಸಂಪನ್ಮೂಲದ ಅಭಾವ ಸೇರಿ ಹಲವು ಕಾರಣಗಳಿಂದ ಮುಚ್ಚಲು ರಾಜ್ಯ ಸರ್ಕಾರ ಚಿಂತನೆ ಆರಂಭಿಸಿದೆ.
ಈ ಕುರಿತಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಿರುವ ಉನ್ನತ ಮಟ್ಟದ ಸಮಿತಿ ಮಂಡ್ಯ ಕೊಡಗು ಕೊಪ್ಪಳ ಚಾಮರಾಜನಗರ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಿ ಅಲ್ಲಿನ ವಿದ್ಯಾರ್ಥಿಗಳನ್ನು ಸಮೀಪದ ವಿಶ್ವವಿದ್ಯಾಲಯಗಳ ಜೊತೆ ಸಂಯೋಜನೆ ಮಾಡಲು ಸಲಹೆ ಮಾಡಿದೆ.
ಇದು ಶಿಕ್ಷಣ ಪ್ರೇಮಿಗಳು ಮತ್ತು ಪ್ರತಿಪಕ್ಷ ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿರುವ ಬೆನ್ನೆಲ್ಲೇ ಕಾಂಗ್ರೆಸ್ಸಿನ ಶಾಸಕರು ಕೂಡ ಇದರ ವಿರುದ್ಧ ಧ್ವನಿಯೆತ್ತಿದ್ದಾರೆ.
ಕಳೆದ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೊಡಗು ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರದ ಬಗ್ಗೆ ಪ್ರಸ್ತಾಪ ಮಾಡಿದ ಶಾಸಕ ಮಂತರ ಗೌಡ ಯಾವುದೇ ಕಾರಣಕ್ಕೂ ಕೊಡಗು ವಿಶ್ವವಿದ್ಯಾಲಯ ಮುಚ್ಚಬಾರದು ಎಂದು ಆಗ್ರಹಿಸಿದರು.
ಕೊಡಗು ವಿಶ್ವವಿದ್ಯಾಲಯ ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದರ ಜೊತೆಗೆ ಜಿಲ್ಲೆಯ ಜನರು ಭಾವನಾತ್ಮಕವಾದ ನಂಟು ಹೊಂದಿದ್ದಾರೆ ಹೀಗಾಗಿ ರಾಜ್ಯ ಸರ್ಕಾರ ವಿಶ್ವವಿದ್ಯಾಲಯವನ್ನು ಸದೃಢಗೊಳಿಸಲು ಅಗತ್ಯವಿರುವ ಆರ್ಥಿಕ ಅನುದಾನ ಮತ್ತು ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ರಾಜ್ಯ ಸರ್ಕಾರ ಯಾವುದೋ ಒತ್ತಡಕ್ಕೆ ಮಣಿದು ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಲ್ಲಿ ಅದರ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೇನೆ ಈಗಾಗಲೇ ವಿಶ್ವವಿದ್ಯಾಲಯ ಮುಚ್ಚುವ ಚಿಂತನೆ ವಿರೋಧಿಸಿ ಕೊಡಗಿನಲ್ಲಿ ಪ್ರತಿಭಟನೆ ಆರಂಭವಾಗಿದ್ದು ತಾವು ಕೂಡ ಅನಿವಾರ್ಯವಾಗಿ ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಮಂತರ ಗೌಡ ಅವರ ಈ ವಾದಕ್ಕೆ ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದರು ಎನ್ನಲಾಗಿದೆ ಶಾಸಕರ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸರ್ಕಾರ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಯಾರೂ ಕೂಡ ಈ ವಿಷಯವಾಗಿ ಉದ್ವೇಗ ಅಥವಾ ಭಾವನಾತ್ಮಕವಾಗಿ ಪ್ರತಿಕ್ರಿಸಬಾರದು ಎಂದು ಸಲಹೆ ಮಾಡಿರುವುದಾಗಿ ತಿಳಿದು ಬಂದಿದೆ.