ಚಿತ್ರದುರ್ಗ,ಆ. 21-
ಪದವಿ ವಿದ್ಯಾರ್ಥಿನಿಯನ್ನು ಕೊಲೆಗೈದು ಮೃತದೇಹಕ್ಕೆ ಬೆಂಕಿ ಇಟ್ಟು ಪೈಶಾಚಿಕ ಕೃತ್ಯ ನಡೆಸಿದ ಪರಿಚಯಸ್ಥನನ್ನು ಪೊಲೀಸರು ಬಂಧಿಸಿದ್ದಾರೆ.
ಕ್ಯಾನ್ಸರ್ ಬಾಧಿತನಾಗಿ ಮೂರನೇ ಹಂತದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಚೇತನ್ ಬಂಧಿತ ಆರೋಪಿಯಾಗಿದ್ದಾನೆ.
ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಕೋವೇರಹಟ್ಟಿ ಮೂಲದ ವರ್ಷಿತಾ(19) ಬರ್ಬರ ಕೊಲೆಯಾಗಿದ್ದು,ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕ ಚೇತನ್ ವಿದ್ಯಾರ್ಥಿನಿ ವರ್ಷಿತಾ ಜತೆ ಸಂಪರ್ಕದಲ್ಲಿದ್ದು,ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬೇರೊಬ್ಬನ ಜೊತೆ ವರ್ಷಿತಾ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದೇನೆ ಎಂದಿರುವ ಚೇತನ್,ಬಳಿಕ ಮೃತ ದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಬೆಂಕಿಹಚ್ಚಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿದ್ದ ವರ್ಷಿತಾಳ ಶವ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರೆ 48ರ ಬಳಿ ಪತ್ತೆ ಆಗಿತ್ತು. ಅತ್ಯಾಚಾರ ಎಸಗಿ ಕೊಲೆಗೈದು ಬೆಂಕಿ ಹಚ್ಚಿರುವುದಾಗಿ ಶಂಕಿಸಲಾಗಿತ್ತು.
ಎಸ್ಸಿ, ಎಸ್ಟಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವರ್ಷಿತಾ ಇರುತ್ತಿದ್ದಳು. ಆಗಸ್ಟ್ 14ರಂದು ಊರಿಗೆ ಹೋಗಲು ರಜೆ ಕೋರಿ ಹಾಸ್ಟೆಲ್ ವಾರ್ಡನ್ ಗೆ ಲೀವ್ ಲೆಟರ್ ನೀಡಿದ್ದಳು.
ಅದೇ ದಿನ ಹಾಸ್ಟೆಲ್ ನಿಂದ ವರ್ಷಿತಾ ತನ್ನ ಫೋನ್ ನಲ್ಲಿ ಮಾತನಾಡುತ್ತಾ ಕಾಲೇಜು ಯೂನಿಫಾರ್ಮ್ ನಲ್ಲಿ ಸಹಪಾಠಿ ಜತೆ ತೆರಳಿದ್ದಳು.
ಇನ್ನು ವಿದ್ಯಾರ್ಥಿನಿ ವರ್ಷಿತಾಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕಿದ್ದಾರೆ. ವರ್ಷಿತಾ ಸಾವಿಗೆ ನ್ಯಾಯ ಕೊಡಿಸುವಂತೆ ಜಿಲ್ಲಾಸ್ಪತ್ರೆಯ ಶವಾಗಾರ ಬಳಿ ಆಕ್ರಂದಿಸಿದರು. ಚಿತ್ರದುರ್ಗದ ಚೇತನ್ ನಮ್ಮ ಪುತ್ರಿಯನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದರು.
ಚೇತನ್ ವರ್ಷಿತಾಳೊಂದಿಗೆ ಫೋನ್ ನಲ್ಲಿ ಮಾತಾಡುತ್ತಿದ್ದ. ಚುಡಾಯಿಸುತ್ತಿದ್ದ, ಆಕೆಯೊಂದಿಗೆ ಓಡಾಡುತ್ತಿದ್ದ.ನಮಗೆ ವರ್ಷಿತಾಳ ಸಾವಿಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೆ ನಾವು ಮೃತದೇಹ ತೆಗೆದುಕೊಂಡು ಹೋಗಲ್ಲ. ಚೇತನ್ ನನ್ನು ಗಲ್ಲಿಗೇರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ