ನವದೆಹಲಿ: ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಬೆಂಗಳೂರಿನ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದ ಬಿಡಿಎ ಆಯುಕ್ತರನ್ನು ವರ್ಗಾಯಿಸಲು ಕೋರ್ಟ್ ಆದೇಶಿಸಿದೆ.
ಕೋರ್ಟ್ ಆದೇಶದ ಬಗ್ಗೆ ಅವಿಧೇಯತೆ ತೋರಿದ್ದಕ್ಕೆ ಬಿಡಿಎ ಆಯುಕ್ತ ರಾಜೇಶ ಗೌಡ ಅವರನ್ನು ಪ್ರಾಧಿಕಾರದಿಂದ ವರ್ಗಾವಣೆ ಮಾಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹು ಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದ ಕಾರಣಕ್ಕೆ ಬಿಡಿಎ ಆಯುಕ್ತರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸುಪ್ರೀಂ ಕೋರ್ಟ್ 2021ರ ಅಕ್ಟೋಬರ್ 29ರಂದು ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ಬಿಡಿಎ ತೀರ್ಮಾನ ತೆಗೆದುಕೊಂಡಿದ್ದಕ್ಕೆ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ವಿಭಾಗೀಯ ಲ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ಬಿಡಿಎ ಅಧಿಕಾರಿಗಳ ಧೋರಣೆಗೆ ಕಿಡಿಕಾರಿತು.
‘ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆಯನ್ನು ನಾವು ನಿರ್ಬಂಧಿಸಿದ್ದೇವೆ.ಆದರೂ ಆಯುಕ್ತರು ನಮ್ಮ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿತು
ಆಯುಕ್ತರು ಇಂತಹ ತೀರ್ಮಾನದಿಂದಬ ಪ್ರಾಧಿಕಾರಕ್ಕೆ ಭಾರಿ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಹೇಳಿತು
ಮರು ಸ್ವಾಧೀನ ಪಡಿಸಿಕೊಂಡಿರುವ ಅಥವಾ ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ 2021ರ ಅಕ್ಟೋಬರ್ 29ರಂದು ಆದೇಶಿಸಿತ್ತು.
ಆದರೆ, ಪ್ರಾಧಿಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಬಳಿಕ ಮಧ್ಯಂತರ ಅರ್ಜಿ ಸಲ್ಲಿಸಿ, ತನ್ನ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿತ್ತು.