ಬೆಂಗಳೂರು,ಮಾ.22-
ರಾಜ್ಯದ ಗಡಿಭಾಗದಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಖಂಡಿಸಿ,ಮೇಕೆದಾಟು ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಇಂದು ಕರೆ ನೀಡಿದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ನಿಂದ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಎಂದಿಗಿಂತ ಸ್ಪಲ್ಪ ಕಡಿಮೆಯಿದೆ, ಸರ್ಕಾರಿ,ಖಾಸಗಿ ಸೇರಿದಂತೆ ಬಸ್ ಇನ್ನಿತರ ವಾಹನಗಳ ಸಂಚಾರ ಸುಗಮವಾಗಿದ್ದು, ಎಲ್ಲಿಯೂ ಬಂದ್ ನಿಂದ ತೊಂದರೆ ಉಂಟಾಗಿಲ್ಲ.
ರಾಜಧಾನಿ ಬೆಂಗಳೂರಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ,ಅಂಗಡಿ ಮುಗ್ಗಟ್ಟುಗಳ ವ್ಯವಹಾರವು ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದೆ,ಬಂದ್ ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟದ ಮುಖಂಡರು,ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಸ್‌ಗಳಿಗೆ ಅಡ್ಡಲಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಎರಡು ತಾಸು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆ ಪೊಲೀಸರು ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಎರಡು ಭಾಗಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದ ಎಲ್ಲಾ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಸ್ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ.
ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಬಿಎಂಟಿಸಿ, ವಿಮಾನ-ರೈಲು ಹಾರಾಟ ಎಂದಿನಂತಿದ್ದು,ಪರೀಕ್ಷೆಗಳು ಯಾವುದೇ ಅಡೆತಡೆಯಿಲ್ಲದೇ ನಡೆದಿವೆ.
ಓಲಾ, ಊಬರ್ ಚಾಲಕರಿಂದ ಕೆಲ ಆಟೋ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರೆ,ಅವುಗಳ ಸಂಚಾರ ವಿಳಂಬವಾಗಿತ್ತು. ಅಗತ್ಯ ಸೇವೆಗಳಾದ ಹಾಲು, ಔಷಧ, ದಿನಪತ್ರಿಕೆ, ತರಕಾರಿ ಸೇವೆಗಳು ಎಂದಿನಂತಿದ್ದವು.
ವಿಜಯಪುರದಲ್ಲಿ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ನಗರದ ನಿವಾಸಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೆಎಸ್ಸಾರ್ಟಿಸಿ ಬಸ್ಗಳು ಎಂದಿನಂತೆ ಓಡಾಡುತ್ತಿವೆ ಮತ್ತು ಆಟೋಗಳು ಸಹ ರಸ್ತೆಗಿಳಿದಿವೆ. ಅಂಗಡಿ ಮುಂಗಟ್ಟು ಹೋಟೆಲ್ಗಳು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿವೆ.
ಧಾರವಾಡ, ಹಾವೇರಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಎಂದಿನಂತೆ ಬಸ್, ಆಟೋ ಸಂಚಾರ ಮತ್ತು ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೊಟೇಲ್ಗಳು ತೆರೆದಿವೆ.