ಬೆಂಗಳೂರು,ಮೇ.7:
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಆರೋಪದ ಪೆನ್ ಡ್ರೈವ್ ಬಹಿರಂಗ ಪ್ರಕರಣ ಕ್ಷಣಕ್ಕೊಂದು ತಿರುವು ನಡೆಯುತ್ತಿದೆ. ಬಿಜೆಪಿ ನಾಯಕರ ಒತ್ತಡ ಮತ್ತು ಕುಮಾರಸ್ವಾಮಿ ಅವರ ಒಪ್ಪಿಗೆಯ ಮೇರೆಗೆ ವಕೀಲ ದೇವರಾಜೇ ಗೌಡ ಈ ಪೆನ್ ಡ್ರೈವ್ ಬಿಡುಗಡೆ ಮಾಡಿದ್ದಾರೆ ಎಂದು ಹಿರಿಯ ನಾಯಕ ಶಿವರಾಮೇಗೌಡ ಆಪಾದಿಸಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ನಿನ್ನೆ ವಕೀಲ ದೇವರಾಜೇಗೌಡ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಇಂದು ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ.
ದೇವರಾಜಗೌಡ ಹಾಗೂ ತಮ ನಡುವಿನ ಭೇಟಿ ಹಾಗೂ ಅನಂತರದ ಬೆಳವಣಿಗೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿರುವ ಶಿವರಾಮೇಗೌಡ ಅವರು ಈ ಪ್ರಕರಣದಲ್ಲಿ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಾವು ಮತ್ತು ದೇವರಾಜೇಗೌಡ ಬಿಜೆಪಿಯಲ್ಲಿದ್ದೇವು. ಅವರು ಹೊಳೆನರಸೀಪುರದ ಅಭ್ಯರ್ಥಿ ಎಂಬ ಕಾರಣಕ್ಕೆ ಸಿಕ್ಕಾಗ ಹಾಯ್ ಬಾಯ್ ಹೇಳುತ್ತಿದ್ದೆ. ನಾಲ್ಕು ದಿನಗಳ ಹಿಂದಷ್ಟೆ ಅವರ ಜೊತೆ ಮಾತನಾಡಿದ್ದು ಬಿಟ್ಟರೆ, ಅದಕ್ಕೂ ಮೊದಲು ಹೆಚ್ಚಿನ ಪರಿಚಯ ಇರಲಿಲ್ಲ.ತಮ್ಮ ಮನೆಯಲ್ಲಿ ಎಂದಿನಂತೆ ಜನರನ್ನು ಭೇಟಿ ಮಾಡುವ ವೇಳೆ ಹೊಳೆನರಸೀಪುರದವರು ಬಂದಿದ್ದರು. ಅವರು ನಮ್ಮ ದೇವರಾಜೇಗೌಡರು ನಿಮ್ಮನ್ನು ಕೇಳುತ್ತಿದ್ದರು ಎಂದು ಹೇಳಿದರು. ವಿಡಿಯೋ ಬಹಿರಂಗದ ಬಗ್ಗೆ ನನಗೂ ಕುತೂಹಲ ಇತ್ತು. ಹಾಗಾಗಿ ಕರೆ ಮಾಡಿಕೊಡುವಂತೆ ಹೊಳೆನರಸೀಪುರದವರ ಬಳಿ ಹೇಳಿದ್ದೆ. ಫೋನ್‌ನಲ್ಲಿ ಸಂಪರ್ಕಕ್ಕೆ ಸಿಕ್ಕ ದೇವರಾಜೇಗೌಡರಿಗೆ ನಿಮ್ಮ ಆಸೆ ಈಡೇರಿತ್ತಲ್ಲ, ಎರಡು ವರ್ಷದ ನಿಮ್ಮ ಹೋರಾಟ ಯಶಸ್ವಿಯಾಯಿತಲ್ಲ ಎಂಬುದಾಗಿ ಅಭಿನಂದಿಸಿದ್ದೆ ಎಂದು ತಿಳಿಸಿದರು.
ಆಗ ದೇವರಾಜ ಗೌಡ ಅವರು ನಾನು ಹಿರಿಯ ವಕೀಲೆ ಪ್ರಮೀಳಾನೇಸರ್ಗಿ ಅವರ ಕಚೇರಿಯಲ್ಲಿ ಕಿರಿಯ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ ನಾನು ತುಂಬಾ ಕಷ್ಟದಲ್ಲಿದ್ದು ನಿಮ್ಮನ್ನು ಭೇಟಿಯಾಗಬೇಕಿದೆ ಎಂದು ಹೇಳಿದ್ದರು ಆಗ ನಾನು ಈಗ ಸಾಧ್ಯವಿಲ್ಲ ನಾನು ಕೊಂಚ ಬ್ಯುಸಿಯಾಗಿದ್ದೇನೆ ಎಂದು ಹೇಳಿದ್ದೆ ಆನಂತರದಲ್ಲಿ ವಕೀಲೆ ಪ್ರಮೀಳಾನೇಸರ್ಗಿ ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತನಾಡಿದ್ದೆ ಎಂದು ತಿಳಿಸಿದರು
ಈ ವೇಳೆ ದೇವರಾಜ ಗೌಡ ಅವರು ತಮಗೆ
ಬಿಜೆಪಿಯ ಎಲ್ಲಾ ಮುಖಂಡರು ವಿಡಿಯೋ ಬಹಿರಂಗ ಪಡಿಸುವಂತೆ ಬಲವಂತ ಮಾಡಿದ್ದರು. ಅದಕ್ಕಾಗಿ ನಾನೇ ಬಿಡುಗಡೆ ಮಾಡಿದ್ದೆ. ಅದಕ್ಕೆ ಕುಮಾರಸ್ವಾಮಿಯವರ ಒಪ್ಪಿಗೆಯೂ ಇತ್ತು ಎಂದು ನನ್ನ ಬಳಿ ಹೇಳಿಕೊಂಡರು. ನಾನು ವಿಡಿಯೋ ಬಿಡುಗಡೆ ಮಾಡಿದ ಮೇಲೆ ಸಾಕಷ್ಟು ಬೆಳವಣಿಗೆಯಾಗಿದೆ.ವ್ಯಾಪಕ ಚರ್ಚೆಯಾಗುತ್ತಿದೆ. ಒಮೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಸಿ ಎಂದು ಅವರು ಕೇಳಿಕೊಂಡರು. ದೇವರಾಜಗೌಡ ಕೂಡ ಯುವ ಕಾಂಗ್ರೆಸ್‌ನಲ್ಲಿದ್ದರಂತೆ, ಆಗ ಡಿ.ಕೆ.ಶಿವಕುಮಾರ್ ಬೆಂಬಲ ನೀಡಲಿಲ್ಲ ಎಂಬ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು. ಆಗಿದ್ದು ಆಗಿ ಹೋಯಿತು ಬಿಡಿ ಎಂದು ನಾನು ಸಮಾಧಾನ ಮಾಡಿದ್ದೆ. ನಮ ಮಾತುಕತೆ ವೇಳೆಗೆ ಡಿ.ಕೆ.ಶಿವಕುಮಾರ್ ಬೇರೆ ಊರಿನ ಪ್ರವಾಸದಲ್ಲಿದ್ದರು. ದೇವರಾಜೇಗೌಡ ರಾತ್ರಿ ಏಳು ಗಂಟೆಯವರೆಗೂ ತಮ ಜೊತೆಯಲ್ಲಿ ತಿಂಡಿ ತಿಂದುಕೊಂಡು ತಿರುಗಾಡಿಕೊಂಡಿದ್ದರು. ಆ ಬಳಿಕ ಹೋದರು. ಆ ಕ್ಷಣದಲ್ಲಿ ಅವರ ಚಟುವಟಿಕೆ ನೋಡಿದರೆ ಪ್ರಜ್ವಲ್ ರೇವಣ್ಣನಿಗಿಂತ ದೊಡ್ಡ ಮನೋರೋಗಿ ಎನಿಸಿತ್ತು ಎಂದು ವಿವರಿಸಿದರು.
ತಮ್ಮ ಮೊಬೈಲ್ ಅನ್ನು ಗುಪ್ತಚರ ಇಲಾಖೆಯವರು ಟಾಪ್ ಮಾಡುತ್ತಿದ್ದಾರೆ ಎಂದು ಆತ ವಾಕಿಟಾಕಿ ಬಳಸುತ್ತಿದ್ದಾರೆ. ಹೋರಾಟ ಮಾಡುವ ನೀನು ಹುಷಾರು ಎಂದು ನಾನು ಕಾಳಜಿಯಿಂದ ಹೇಳಿದ್ದೆ. ರಾತ್ರಿ 11ಗಂಟೆಗೆ ಎಂದಿನಂತೆ ನಾನು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆರಂಭದಲ್ಲಿ ದೇವರಾಜೇಗೌಡ ನಿಮ ಬಳಿ ಮಾತನಾಡಬೇಕಂತೆ ಮಾತನಾಡುತ್ತೀರಾ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಕೇಳಿದೆ.
ಅವರು ಬೇಡ ಎಂದರು, ನಾನೇಕೆ ಅವರ ಜೊತೆ ಮಾತನಾಡಬೇಕು ಎಂದು ಅವರು ಹೇಳಿದರು. ನಾನೇ ಬಲವಂತ ಮಾಡಿ ಒಪ್ಪಿಸಿದೆ. ಸರಿ ಕರೆ ಮಾಡಿಕೊಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಆ ವೇಳೆಗೆ ದೇವರಾಜೇಗೌಡ ದೂರದಲ್ಲಿದ್ದೇನೆ ಬರಲು ತಡವಾಗುತ್ತದೆ ಎಂದು ಹೇಳಿದ್ದರು.ನಾನು
ಫೋನ್‌ನಲ್ಲೇ ಮಾತನಾಡಿ ಎಂದು ಡಿ.ಕೆ.ಶಿವಕುಮಾರ್ ಕೈಗೆ ಫೋನ್ ಕೊಟ್ಟೆ. ಡಿ.ಕೆ.ಶಿವಕುಮಾರ್ ಬಳಿಯೂ ದೇವರಾಜ್‌ಗೌಡ ಫೋನ್‌ನಲ್ಲಿ ಎರಡು ಮೂರು ಮಂದಿ ಸಂತ್ರಸ್ತರ ಬಗ್ಗೆ ವಿವರಣೆ ನೀಡುತ್ತಿದ್ದರು,ಅದನ್ನೇಲ್ಲಾ ಕೇಳಲು ನಿರಾಕರಿಸಿದ ಡಿ.ಕೆ.ಶಿವಕುಮಾರ್ ಎಸ್‌ಐಟಿ ರಚನೆ ಮಾಡಿದ್ದೇವೆ. ಏನೇ ಇದ್ದರೂ ತನಿಖಾಧಿಕಾರಿಗಳ ಮುಂದೆ ಹೇಳಿ ಎಂದು ಫೋನ್ ಕಟ್ ಮಾಡಿದ್ದರು ಎಂದು ಶಿವರಾಮೇಗೌಡ ವಿವರಿಸಿದ್ದಾರೆ.
ಡಿ.ಕೆ.ಶಿವಕುಮಾರ್‌ಗೂ ಇದಕ್ಕೂ ಸಂಬಂಧ ಇಲ್ಲ, ದೇವರಾಜೇಗೌಡನನ್ನೂ ಕರೆದುಕೊಂಡು ಬಾ ಎಂದು ನನ್ನ ಬಳಿ ಅವರು ಹೇಳಿರಲಿಲ್ಲ. ಇಷ್ಟು ಕೆಳಮಟ್ಟದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಡಿ.ಕೆ.ಶಿವಕುಮಾರ್ ಮಾತನಾಡಿರುವ ಆಡಿಯೋ ಇದ್ದರೆ ಪೂರ್ತಿ ಬಹಿರಂಗ ಮಾಡಲಿ. ರಾಜಕೀಯಕ್ಕಾಗಿ ಸ್ಟಂಟ್ ಮಾಡುವುದು ಬೇಡ ಎಂದು ಶಿವರಾಮೇಗೌಡ ಸವಾಲು ಹಾಕಿದರು.
ಡಿ.ಕೆ.ಶಿವಕುಮಾರ್ ಮಾತನಾಡಿರುವ ಕಾಲ್ ಅನ್ನು ದೇವರಾಜೇಗೌಡ ರೆಕಾರ್ಡ್ ಮಾಡಿಕೊಳ್ಳುವುದು ನನಗೆ ಗೊತ್ತಿರಲಿಲ್ಲ. ವಕೀಲ ಎಂಬ ಗೌರವದಿಂದ ನಾನು ಮಾತನಾಡಿದ್ದೆ, ಈ ರೀತಿ ಮಾಡುತ್ತಾರೆ ಎಂಬ ಮಾಹಿತಿ ಇದಿದ್ದರೆ ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.