ಬೆಂಗಳೂರು:
ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ಹೂತು ಹಾಕಿದ್ದಾಗಿ ಹೇಳಿ ಕೋಲಾಹಲ ಸೃಷ್ಟಿಸಿದ್ದ ಮುಸುಕುಧಾರಿ ಚಿನ್ನಯ್ಯ ತನ್ನ ಬಳಿ ಇದ್ದ ಬುರಡೆಯನ್ನು ದೆಹಲಿಗೆ ಕೊಂಡೊಯ್ದಿದ್ದಾನೆ.
ಈ ಅಂಶ ಎಸ್ ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಿತೂರಿ ಗ್ಯಾಂಗ್ ನಿಂದ ಆರಂಭದಲ್ಲಿ 2 ಲಕ್ಷ ರೂಪಾಯಿಗಳನ್ನು ಪಡೆದು ಹಣ ಹೂತು ಹಾಕಿರುವ ಸುಳ್ಳು ಕತೆಗಳನ್ನು ಕಟ್ಟಲು ಚಿನ್ನಯ್ಯ ಆರಂಭಿಸಿದ್ದಾನೆ ಎಂದು ಎಸ್ ಐಟಿ ಪತ್ತೆ ಮಾಡಿದೆ.
ಧರ್ಮಸ್ಥಳದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ಮೃತದೇಹದ ತಲೆಯನ್ನು ಕುತ್ತಿಗೆಯಿಂದ ಬೇರ್ಪಡಿಸಿದ ನಂತರ ಬುರುಡೆಯನ್ನು ರಹಸ್ಯವಾಗಿ ತೆಗೆದುಕೊಂಡು ಹೋಗಿ ಗ್ಯಾಂಗ್ ನಿರ್ದೇಶನದಂತೆ ಪ್ರಮುಖರೊಬ್ಬರನ್ನು ಭೇಟಿಯಾಗಿದ್ದ.
ಇವರ ಸಲಹೆಯಂತೆ ಜುಲೈ 3ರಂದು ವಕೀಲರೊಂದಿಗೆ ದಕ್ಷಿಣಕನ್ನಡ ಜಿಲ್ಲೆ ಎಸ್ಪಿ ಕಚೇರಿಗೆ
ಆಗಮಿಸಿದ ಈತ ತಲೆ ಬುರುಡೆ ನೀಡಿ ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರ ಮತ್ತು ಮಕ್ಕಳ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿದ್ದ.ತನ್ನ ಬಳಿ ಇದ್ದ ಬುರುಡೆಯನ್ನೇ ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ಚಿನ್ನಯ್ಯ ಮನವಿ ಮಾಡಿದ್ದ.ಇದು ಪೊಲೀಸರ ಹಾದಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಎಸ್ ಐಟಿ ಅಭಿಪ್ರಾಯ ಪಟ್ಟಿದೆ.
ಈ ನಡುವೆ ಅವರ ತಂಡದಲ್ಲಿದ್ದ ಉನ್ನತ ವ್ಯಕ್ತಿಯೊಬ್ಬರು ಈತನನ್ನು ದೆಹಲಿಗೆ ತಲುಪಿಸಲು ಸಕಲ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.
ದೆಹಲಿಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ರಹಸ್ಯವಾಗಿ ಭೇಟಿ ಮಾಡಿದ ಆತ ಪೊಲೀಸರು, ನ್ಯಾಯಾಧೀಶರು ಹಾಗೂ ತನಿಖಾಧಿಕಾರಿಗಳ ಮುಂದೆ ಯಾವ ರೀತಿ ಹೇಳಿಕೆಗಳನ್ನು ನೀಡಬೇಕು ಎಂಬುದರ ಬಗ್ಗೆಯೂ ತರಬೇತಿಯನ್ನು ಪಡೆದುಕೊಂಡಿದ್ದ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ನಾನು ಹೇಳಿದಂತೆ ನಡೆದುಕೊಂಡರೆ ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಎದುರಾಗುವುದಿಲ್ಲ. ನಿಮಗೆ ಬೇಕಾದ ಆರ್ಥಿಕ ನೆರವನ್ನು ನಮ್ಮ ಕಡೆಯವರು ತಲುಪಿಸಿದ್ದಾರೆ. ಮೊದಲು ನೀವು ನಾನು ಹೇಳಿದಂತೆ ನಡೆದುಕೊಳ್ಳಿ ಅಪ್ಪಿತಪ್ಪಿಯೂ ಈ ರಹಸ್ಯವನ್ನು ಎಲ್ಲಿಯೂ ಬಾಯಿಬಿಡದಂತೆ ಗಣ್ಯವ್ಯಕ್ತಿ ಹೇಳಿಕೊಟ್ಟಿದ್ದರು ಎನ್ನಲಾಗಿದೆ.
ಎಲ್ಲವೂ ಮುಗಿದ ನಂತರವೇ ಏಕಾಏಕಿ ಜು.3ರಂದು ಪ್ರತ್ಯಕ್ಷನಾದ ಮುಸುಕುಧಾರಿ 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ನಾನು ಶವಗಳನ್ನು ಹೂತು ಹಾಕಿದ್ದಾಗಿ ಕಥೆ ಕಟ್ಟಿದ್ದ.ಜೊತೆಗೆ ಆತ ಒಂದು ತಲೆಬುರುಡೆಯನ್ನು ಸಾಕ್ಷಿಯಾಗಿ ಒಪ್ಪಿಸಿದ್ದ. ಆದರೆ, ಎಸ್‌ಐಟಿ ತನಿಖೆಯಲ್ಲಿ ಈ ತಲೆಬುರುಡೆಯು ಧರ್ಮಸ್ಥಳದ ಕಾಡಿನಲ್ಲಿ ಒಂದು ಅಸ್ಥಿಪಂಜರದ ಭಾಗವಾಗಿ ಕಂಡುಬಂದಿತ್ತು ಎಂದು ತಿಳಿದುಬಂದಿದೆ.
ಈ ಅಸ್ಥಿಪಂಜರವು ನೇಣುಬಿಗಿದು ಮೃತಪಟ್ಟ ಒಬ್ಬ ವ್ಯಕ್ತಿಯದ್ದಾಗಿತ್ತು ಎಂದು ತನಿಖೆಯಿಂದ ದೃಢಪಟ್ಟಿದೆ. ಚಿನ್ನಯ್ಯ ಈ ತಲೆಬುರುಡೆಯನ್ನು ಎತ್ತಿಕೊಂಡು, ತನ್ನ ಗುಂಪಿನ ಸಹಾಯದಿಂದ ಸಾಕ್ಷಿಯಾಗಿ ಪೊಲೀಸರಿಗೆ ಒಪ್ಪಿಸಿದ್ದನು.