ಬೆಂಗಳೂರು,ಸೆ.30-ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕೆನ್ನುವ ಕನಸು ಹೊತ್ತು ನಗರಕ್ಕೆ ಬಂದಿದ್ದ ಯುವಕನೋರ್ವ ಗೊವಿಂದರಾಜನಗರದ ಪಿಜಿ ಹಾಸ್ಟೆಲ್ ನಲ್ಲಿ ಅನುಮಾನಾಸ್ಪದ ಸಾವನಪ್ಪಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿವಮೊಗ್ಗ ಮೂಲದ ಅನಿಲ್ ಕುಮಾರ್ ಮೃತ ದುರ್ದೈವಿ. ದಾಸರಹಳ್ಳಿಯ ವಿನಾಯಕ ಪಿಜಿಯಲ್ಲಿ ಕಳೆದ 20 ದಿನಗಳಿಂದ ವಾಸವಾಗಿದ್ದ ಅನಿಲ್, ದಿನಗಳ ಹಿಂದೆ ತಾಯಿಗೆ ಕರೆ ಮಾಡಿ ಫುಡ್ ಪಾಯಿಸನ್ ಆಗಿದೆ. ಆಸ್ಪತ್ರೆಗೆ ಹೋಗಿ ಬಂದು ಕರೆ ಮಾಡುವೆ ಎಂದು ಹೇಳಿ ಕಳೆದ ಸೆ.25 ಸಂಜೆ ಸ್ನಾನಕ್ಕೆಂದು ಸ್ನಾನದ ಕೊಠಡಿಗೆ ಹೋದವನು ಸೆ.27ರ ಬೆಳಗ್ಗೆ ಪಿಜಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಹೌಸ್ ಕೀಪಿಂಗ್ನವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಮೂರು ದಿನಗಳ ಕಾಲ ಶವ ಸ್ನಾನದ ಕೊಠಡಿಯಲ್ಲೇ ಇದ್ದರೂ ಕೂಡ ಯಾರಿಗೂ ಗೊತ್ತಾಗಲಿಲ್ವಾ? ಸುಮಾರು 25 ಯುವಕರು ಇರುವ ಪಿಜಿಯಲ್ಲಿ 2 ದಿನಗಳಿಂದ ಅನಿಲ್ ಶವವಾಗಿರುವುದು ಯಾರ ಗಮನಕ್ಕೂ ಬಂದಿಲ್ಲ ಎಂಬ ಸಂಶಯ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇನ್ನು ಈ ಪಿಜಿಯಲ್ಲಿ ಯಾವುದೇ ರೀತಿಯಾದಂತಹ ಸುರಕ್ಷತಾ ಕ್ರಮಗಳಿಲ್ಲದೇ ಇರುವುದು ಈ ಘಟನೆಗೆ ಕಾರಣ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತೆ. ಮಾತ್ರವಲ್ಲದೇ ಪಿಜಿ ಮಾಲೀಕರ ನಿರ್ಲಕ್ಷವೇ ಈ ಸಾವಿಗೆ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನಿಲ್ ತಂದೆ ಪಿಜಿ ಅವರೇ ನನ್ನ ಮಗನ ಸಾವಿಗೆ ನೇರ ಕಾರಣ ಎಂದು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆ ಮಾಡಿದ್ದು, ಸಹಜ ಸಾವು ಎಂದು ವರದಿ ಬಂದಿದೆ. ಸದ್ಯ ಮೃತ ತಂದೆ ನನ್ನ ಮಗನ ಸಾವು ಸಹಜ ಸಾವು ಅಲ್ಲ ಎಂದು ಆರೋಪ ಮಾಡಿದ್ದು,ಈ ಸಂಬಂಧ ಗೋವಿಂದರಾಜನಗರ ಪೊಲೀಸರು ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ದಾರೆ.