ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಚಿವ ಪ್ರಭು ಚವ್ಹಾಣ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ ಅವರಿಗೆ ಸಿಐಡಿ ಯಾಕೆ ನೋಟಿಸ್ ನೀಡಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನೇಮಕಾತಿ ಅಕ್ರಮ ಕುರಿತು ಸಚಿವರು ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಬರೆದಿರುವ ಪತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ.
ಇದರಲ್ಲಿನ ಒಂದು ಪತ್ರದಲ್ಲಿ ಪಿ.ಎಸ್.ಐ ನೇಮಕಾತಿಯ ಆಯ್ಕೆ ಪಟ್ಟಿ ಬಿಡುಗಡೆ ನಂತರ ಪರೀಕ್ಷೆ-1 ಮತ್ತು ಪರೀಕ್ಷೆ -2ರಲ್ಲಿ ಕಲಬುರಗಿ ಜಿಲ್ಲೆಯ ಅಫ್ಜಲ್‍ಪುರ ತಾಲ್ಲೂಕಿನಲ್ಲೇ 43ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿರುವುದನ್ನು ತಡೆಗಟ್ಟಲು ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ತಮ್ಮನ್ನು ಕೋರುತ್ತೇನೆ ಎಂದು ಸಚಿವ ಪ್ರಭುಚವ್ಹಾಣ್ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಇನ್ನೊಂದು ಪತ್ರ ಬಿಜೆಪಿಯ ಹಿರಿಯ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾರ್ಚ್ 15ರಂದು ಗೃಹ ಸಚಿವ ಅರಗಜ್ಞಾನೇಂದ್ರರಿಗೆ ಬರೆದಿದ್ದು ಇತ್ತೀಚೆಗೆ ನಡೆದ 545 ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅವರ ನೇಮಕಾತಿಯಲ್ಲಿ ಭಾರೀ ಅಕ್ರಮಗಳು ನಡೆದಿದೆ ಎಂದು ಎಲ್ಲಾ ಕಡೆ ಕೇಳಿ ಬರುತ್ತಿವೆ.ಪತ್ರಿಕೆಗಳಲ್ಲಿ ಕೂಡ ವರದಿಯಾಗಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬ್ಲೂಟೂಥ ಹಾಕಿಕೊಂಡು ಪರೀಕ್ಷೆ ಬರೆದಿದ್ದಾರೆ. ಇನ್ನೊಂದು ಕಡೆ ಕೆಲವರು ಪರೀಕ್ಷೆಗಳನ್ನು ಚೆನ್ನಾಗಿ ಬರೆದಿದ್ದರು ಆಯ್ಕೆಯಾಗಿಲ್ಲ ಎಂಬ ನೋವು ಬಹಳಷ್ಟು ಅಭ್ಯರ್ಥಿಗಳಿಗೆ ಆಗಿದೆ.ಅಕ್ರಮದಲ್ಲಿ ಯಾದಗಿರಿಯ ಒಬ್ಬ ವ್ಯಕ್ತಿ ಸೂತ್ರದಾರಿಯಾಗಿರುವನು ಎಂಬ ವಿಷಯ ಪತ್ರಿಕೆಗಳಲ್ಲಿ ವರದಿಯಾಗಿದೆ. ನನ್ನ ಮತ ಕ್ಷೇತ್ರದ ಹಲವು ಪದವೀಧರ ಅಭ್ಯರ್ಥಿಗಳು ಸಾಕಷ್ಟು ನೋವುಗಳನ್ನು ತೊಡಿಕೊಂಡಿದ್ದಾರೆ. ಈ ಕುರಿತು ಯೋಗ್ಯ ವ್ಯಕ್ತಿಯಿಂದ ತನಿಖೆ ನಡೆಸಿ, ಅನ್ಯಾಯವಾಗಿರುವವರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ರೀತಿ ಪತ್ರ ಬರೆದಿರುವ ಇವರಿಗೆ ನೋಟೀಸ್ ನೀಡಿಲ್ಲ ನನಗೆ ಮಾತ್ರ ನೋಟೀಸ್ ನೀಡಲಾಗಿದೆ ಎಂದು ಹೇಳಿರುವ ಖರ್ಗೆ ನನ್ನ ಮೇಲೆ ಆಸಕ್ತಿ ತೋರಿಸುವ ಬದಲು ತನಿಖೆಯಲ್ಲಿ ಆಸಕ್ತಿ ತೋರಿಸಿ. ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳಿಗೆ ಉತ್ತರಿಸಿ. ಹೆಚ್ಚಿನ ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರಾಗಿದ್ದಾರೆ. ಪರೀಕ್ಷೆ ಬರೆಯಲು ಅವರು ಬಹಳ ಕಷ್ಟ ಪಟ್ಟಿದ್ದಾರೆ. ಅವರಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.
ನನಗೆ ಮಾತ್ರ ಯಾಕೆ ನೋಟೀಸ್-ಪ್ರಿಯಾಂಕ್ ಖರ್ಗೆ
Previous Articleಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ..
Next Article ಗೃಹ ಸಚಿವರನ್ನು ವಜಾಗೊಳಿಸಿ