ಹಾಸನ, ಮೇ.8– ಪಿಎಸ್ಐ ನೇಮಕಾತಿ ಅಕ್ರಮದ ವಿಚಾರಣೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯ ವೇಳೆ ಬಂಧಿತರು ನೀಡಿರುವ ಮಾಹಿತಿಯಿಂದ ಅಕ್ರಮವು ಕಲಬುರಗಿ ಬೆಂಗಳೂರು ಅಲ್ಲದೇ ಇತರ ಜಿಲ್ಲೆಗಳಲ್ಲೂ ನಡೆದಿರುವ ಶಂಕೆ ವ್ಯಕ್ತವಾಗಿದ್ದು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ ಬಂಧನದ ನಡುವೆ ಪರಾರಿಯಾಗಿರುವ ಮತ್ತೊಬ್ಬ ಪ್ರಭಾವಿ ವ್ಯಕ್ತಿಗಾಗಿ ಸಿಐಡಿ ಶೋಧಕಾರ್ಯ ಮುಂದುವರಿಸಿದೆ.
ನೇಮಕಾತಿ ಹಗರಣದ ನಂಟು ಹಾಸನ ಜಿಲ್ಲೆಗೂ ಹಬ್ಬಿದ್ದು, ಪಿಎಸ್ಐ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರಿದ್ದ ವೆಂಕಟೇಶ್ನ ವಶಕ್ಕೆ ಪಡೆಯಲಾಗಿದೆ. ವೆಂಕಟೇಶ್ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ್ನ ಪುತ್ರ. ಚಂದ್ರಶೇಖರ್ ಬೆಕ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವಮೂರ್ತಿಯ ಆಪ್ತ. ಕೇಶವಮೂರ್ತಿ ಮೂಲಕ ಪಿಎಸ್ಐ ನೇಮಕಾತಿಯಲ್ಲಿ ಡೀಲ್ ಮಾಡಿ ಪುತ್ರನ ಆಯ್ಕೆ ಮಾಡಿಸಿರುವ ಆರೋಪದಡಿ ವೆಂಕಟೇಶ್ನ ವಶಕ್ಕೆ ಪಡೆದಿದ್ದಾರೆ.
ಕಸ್ಟಡಿ ವಿಸ್ತರಣೆ:
ಇನ್ನು ಪ್ರಕರಣದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ರುದ್ರಗೌಡ ಪಾಟೀಲ್ನ ಇಂದು ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ.
8 ವಿಶೇಷ ತಂಡಗಳ ರಚನೆ:
ಪ್ರಕರಣದ ತನಿಖೆಗೆ ಸಿಐಡಿಯಿಂದ 8 ವಿಶೇಷ ತಂಡಗಳ ರಚನೆಯಾಗಿದೆ. ಎಂಟು ಡಿವೈಎಸ್ಪಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳ ನೇಮಕ ಮಾಡಲಾಗಿದೆ.
ಪ್ರತಿ ಡಿವೈಎಸ್ಪಿ ತಂಡದಲ್ಲೂ ಇನ್ಸ್ಪೆಕ್ಟರ್, ಸಿಬ್ಬಂದಿ ಇರಲಿದ್ದಾರೆ. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಬಗೆದಷ್ಟು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಆತಂಕಕಾರಿ ಅಂಶ ಪತ್ತೆಯಾಗಿದೆ.