ಬೆಂಗಳೂರು,ನ.26:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ರಾಜ್ಯದಲ್ಲೇ ಅತ್ಯಂತ ದೊಡ್ಡ ಕೇಂದ್ರ ಕಾರಾಗೃಹವಾಗಿದೆ. ಅತ್ಯಂತ ದೊಡ್ಡ ವಿಸ್ತೀರ್ಣದಲ್ಲಿರುವ ಈ ಜೈಲು ಬಯಲು ಬಂದಿಖಾನೆ ಎಂದೇ ಪ್ರಸಿದ್ಧಿ.
ಇಂತಹ ಜೈಲು ಹಲವಾರು ಅಕ್ರಮಗಳ ಕಾರಣಕ್ಕಾಗಿ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ ಜೈಲಿನ ಸಿಬ್ಬಂದಿ ಮತ್ತು ಕಾರಾಗೃಹದಲ್ಲಿ ಬಂಧಿಯಾಗಿರುವ ಕೈದಿಗಳ ನಡುವೆ ಅನೈತಿಕ ಒಪ್ಪಂದ ಏರ್ಪಟ್ಟು ಹಲವು ಅಕ್ರಮಗಳು ನಡೆಯುತ್ತಿವೆ.
ಅನೇಕ ಬಾರಿ ಈ ಜೈಲಿನ ಮೇಲೆ ದಾಳಿ ನಡೆದಾಗ ಮಧ್ಯ ಮಾದಕ ವಸ್ತುಗಳು ಮಾರಕಾಸ್ತ್ರಗಳು ದೊರಕಿದೆ ಕೆಲವು ಕೈದಿಗಳಂತೂ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ ಎಂಬ ಅಂಶ ಕೂಡ ಬೆಳಕಿಗೆ ಬಂದು ತನಿಖೆ ನಡೆಯುತ್ತಿದೆ. ಹಲವು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಆದರೂ ಕೂಡ ಈ ಜೈಲಿನಲ್ಲಿ ಅಕ್ರಮಗಳು ನಿಂತಿಲ್ಲ.
ಈ ಅಕ್ರಮಗಳ ಸಾಲಿಗೆ ಇದೀಗ ಜೈಲಿನಲ್ಲಿ ಕಳ್ಳಭಟ್ಟಿ ತಯಾರಿಕೆ ಕೇಂದ್ರ ಕೂಡ ಸೇರಿದೆ. ಕಳ್ಳಭಟ್ಟಿ ಆರೋಪ ಪ್ರಕರಣದಲ್ಲಿ ಬಂಧಿಯಾಗಿ ಜೈಲು ಸೇರಿರುವ ಕೈದಿಗಳು ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳ್ಳಭಟ್ಟಿ ತಯಾರಿಕೆ ಆರಂಭಿಸಿದ್ದಾರೆ.
ಜೈಲಿನ್ ಇರುವ ಕೈದಿಗಳಿಗೆ ಈ ಕೇಂದ್ರದಿಂದ ಕಳ್ಳಭಟ್ಟಿ ಪೂರೈಕೆ ಮಾಡಲಾಗುತ್ತಿದೆ.
ಜೈಲಿನಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಜೈಲಿಗೆ ತೆರಳಿದ ತನಿಖಾ ತಂಡಕ್ಕೆ ಕಳ್ಳಭಟ್ಟಿ ತಯಾರಿಕೆ ಕೇಂದ್ರ ಕೂಡ ಇರುವುದು ಪತ್ತೆಯಾಗಿದೆ. ಹೊಸ ವರ್ಷ ಆಚರಣೆಗೆ ಈ ಕಳ್ಳಭಟ್ಟಿ ತಯಾರಿಕೆ ಕೇಂದ್ರದಲ್ಲಿ ಭಾರಿ ಪ್ರಮಾಣದ ಮಧ್ಯ ತಯಾರಿಕೆಗೆ ಸಿದ್ಧತೆ ನಡೆದಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ.
ಕೈದಿಗಳು ಕಳ್ಳಭಟ್ಟಿ ತಯಾರಿಕೆಗಾಗಿ ಕೊಳೆತ ದ್ರಾಕ್ಷಿ ಮತ್ತು ಸೇಬು, ರಾಶಿ ರಾಶಿ ಹಣ್ಣುಗಳು ಚಕ್ಕೆ, ಗೋಧಿ ಸಕ್ಕರೆ ಮುಂತಾದ ಪದಾರ್ಥಗಳನ್ನು ಸಂಗ್ರಹ ಮಾಡಿ ಇಟ್ಟುಕೊಂಡಿದ್ದಾರೆ.
ಕಳ್ಳಭಟ್ಟಿ ತಯಾರಿಕೆಗೆ ಒಂದೊಂದು ತಂಡ ಪ್ಲಾನ್ ಮಾಡಿದ್ದು, ಒಂದು ತಂಡ ಕೊಳೆತ ಹಣ್ಣು ಸಂಗ್ರಹ ಮಾಡುತ್ತದೆ. ಮತ್ತೊಂದು ತಂಡ ಜೈಲಿನ ಬೇಕರಿಯಿಂದ ಈಸ್ಟ್ ತಂದು ಎಲ್ಲಾ ಐಟಂಗಳು ಮಿಕ್ಸ್ ಮಾಡಿ ಒಂದು ಕಡೆ ಇಡುತ್ತಿದ್ದರು. ಎಲ್ಲಾ ತಯಾರಾದ ಮೇಲೆ ಕಳ್ಳ ಭಟ್ಟಿ ತಯಾರಿಸುತ್ತಿದ್ದರು ಎಂದು ತಿಳಿದುಬಂದಿದೆ.
Previous Articleಕುತೂಹಲ ಮೂಡಿಸಿದ ಡಿಸಿಎಂ ಕಾರ್ಯತಂತ್ರ
Next Article ಅಧಿಕಾರ ಹಸ್ತಾಂತರಕ್ಕೆ ಮಠಾಧೀಶರ ಎಂಟ್ರಿ!

