ಗಾಂಧಿ ಕುಟುಂಬದ ಮತ್ತೊಂದು ಕುಡಿ ಕರ್ನಾಟಕದಿಂದ ರಾಜಕೀಯ ಹುಟ್ಟು ಪಡೆಯಲಿದೆಯಾ…? ಹೌದು ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ, ಸೋನಿಯಾಗಾಂಧಿ ನಂತರದಲ್ಲಿ ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ಕರ್ನಾಟಕದಿಂದ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ.
ಪ್ರಿಯಾಂಕ ಮೊಟ್ಟ ಮೊದಲಿಗೆ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇ ಕರ್ನಾಟಕದಲ್ಲಿ. ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸೋನಿಯಾ ಗಾಂಧಿ ಕಣಕ್ಕಿಳಿದಾಗ ತಮ್ಮ ತಾಯಿಯ ಪರವಾಗಿ ಮೊಟ್ಟ ಮೊದಲ ಬಾರಿಗೆ ಚುನಾವಣೆ ಪ್ರಚಾರದ ಕಣಕ್ಕೆ ಧುಮುಕಿದ್ದರು. ಇದೀಗ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸುವ ತೆರೆಮರೆ ಕಸರತ್ತುಗಳು ನಡೆದಿವೆ.
ರಾಜ್ಯಸಭೆ ಸದಸ್ಯರಾದ ಬಿಜೆಪಿಯ ಕೆ.ಸಿ.ರಾಮಮೂರ್ತಿ, ನಿರ್ಮಿಲಾ ಸೀತಾರಾಮನ್, ಕಾಂಗ್ರೆಸ್‍ನ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ನಿಧನರಾದ ಆಸ್ಕರ್ ಫರ್ನಾಡಿಸ್ ಸೇರಿದಂತೆ ನಾಲ್ವರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯಿಂದ ಕಾಂಗ್ರೆಸ್ ಪ್ರತಿನಿಧಿಯಾಗಿ ಪ್ರಿಯಾಂಕ ಗಾಂಧಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ತಯಾರಿ ನಡೆದಿದೆ.
ಅದರಲ್ಲು ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಆರಿಸಿ ಕಳುಹಿಸಲು ತಯಾರಿ ನಡೆಸಿದ್ದಾರೆ. ಗಾಂಧಿ ಕುಟುಂಬದೊಂದಿಗೆ ಅಪಾರ ನಿಷ್ಠೆ ಹೊಂದಿರುವ ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾದಾಗ ಪ್ರಿಯಾಂಕ ಗಾಂಧಿ ದೂರವಾಣಿ ಕರೆ ಮಾಡಿ ಶುಭಾಷಯ ಹೇಳಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಂಸದರಾಗಿದ್ದ ಪ್ರಿಯಾಂಕ ಗಾಂಧಿ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆಲವಿಗಾಗಿ ಬಾರೀ ಕಸರತು ನಡೆಸಿದ ಪ್ರಿಯಾಂಕ ಯಶಸ್ವಿಯಾಗಲಿಲ್ಲ.
ಬೇರೆ ಬೇರೆ ರಾಜ್ಯಗಳು ಪ್ರಿಯಾಂಕ ಅವರನ್ನು ರಾಜ್ಯಸಭೆಯಿಂದ ಆರಿಸಿ ಕಳುಹಿಸಲು ದುಂಬಾಲು ಬಿದ್ದಿವೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯವಾಗಿ ಹಿನ್ನೆಡೆ ಅನುಭವಿಸಿದಾಗ ನವ ಹುರುಪು ತುಂಬಿದ್ದೆ ಕರ್ನಾಟಕ. ಚಿಕ್ಕಮಗಳೂರು ಲೋಕಸಭೆಯಿಂದ ಚುನಾಯಿತರಾದ ಇಂದಿರಾ ಗಾಂಧಿ ಮತ್ತೆ ರಾಜಕೀಯದಲ್ಲಿ ವಿಜೃಂಭಿಸಿದರು. ಹಾಗಾಗಿ ಪ್ರಿಯಾಂಕ ಗಾಂಧಿ ಅವರನ್ನು ಕರ್ನಾಟಕದಿಂದ ಆರಿಸಿ ಕಳುಹಿಸಿದರೆ ಮುಂದೆ ಉಜ್ವಲ ಭವಿಷ್ಯ ಇರಲಿದೆ ಎಂಬ ನಂಬಿಕೆಯನ್ನು ಕಾಂಗ್ರೆಸಿಗರು ಹೊಂದಿದ್ದಾರೆ.