ಮಂಗಳೂರು,ಸೆ.18-ಧರ್ಮಸ್ಥಳದ ಬಳಿ ಶವಗಳನ್ನು ಹೂತಿರುವ ಪ್ರಕರಣದ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದೊರೆತ 5 ತಲೆಬುರಡೆ, 113 ಮೂಳೆಗಳನ್ನು
ವಿಧಿವಿಜ್ಞಾನ ಪ್ರಯೋಗಾಲಯ(ಎಫ್ ಎಸ್ ಎಲ್)ಕಳುಹಿಸಲು ಮುಂದಾಗಿದ್ದಾರೆ.
ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿದ್ದೇನೆ ಎಂದು ವಿಠಲ್ ಗೌಡ ಮಾಡಿದ್ದ ಆರೋಪ ಸಂಬಂಧ ಎಸ್ಐಟಿ ಶೋಧ ತೀವ್ರಗೊಂಡಿದ್ದು, ಹಲವು ವಸ್ತುಗಳು ಪತ್ತೆಯಾಗಿವೆ. ಶೋಧದ ವೇಳೆ ಒಂದು ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಕಾರ್ಡ್ ಪತ್ತೆಯಾಗಿದೆ.
ಅಲ್ಲದೆ, ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದ್ದು, ನೇಣುಬಿಗಿದ ಅನುಮಾನ ಮೂಡಿಸಿದೆ. ಮಹಜರು ಸಂದರ್ಭದಲ್ಲಿ ಪತ್ತೆಯಾದ ವಸ್ತುಗಳನ್ನು ಎಸ್ಐಟಿ ಅಧಿಕಾರಿಗಳು ಸೀಲ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಸೋಕೋ ಮತ್ತು ಎಫ್‌ಎಸ್‌ಎಲ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರ ಹಾಗೂ ಪತ್ತೆಯಾದ ವಸ್ತುಗಳನ್ನು ಸಂಗ್ರಹಿಸಿವೆ.
ಬಂಗ್ಲೆಗುಡ್ಡದಲ್ಲಿ ನಿನ್ನೆ ಒಟ್ಟು ಐದು ಬುರುಡೆಗಳು ಮತ್ತು ಮೂಳೆಗಳು ಪತ್ತೆಯಾಗಿದ್ದು, ಎಸ್ಐಟಿ ಪಂಚರ ಸಮ್ಮುಖದಲ್ಲಿ ಮಹಜರು ಪೂರ್ಣಗೊಳಿಸಲಾಗಿತ್ತು.
ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸುಮಾರು 7 ಗಂಟೆಗಳ ಕಾಲ ಮಹಜರು ನಡೆಯಿತು. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಮಹಜರಿನಲ್ಲಿ ಭಾಗಿಯಾಗಿದ್ದರು. 13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿದ್ದು,ಅವುಗಳನ್ನು ಸಂಗ್ರಹಿಸಲಾಗಿದೆ.
ಭೂಮಿಯ ಮೇಲ್ಭಾಗದಲ್ಲೇ ಅಸ್ಥಿಪಂಜರ ಪತ್ತೆಯಾದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೀಲ್ ಮಾಡಲಾದ ಅಸ್ಥಿಪಂಜರ ಮತ್ತು ವಸ್ತುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲು ಎಸ್ಐಟಿ ತಯಾರಿ ನಡೆಸುತ್ತಿದೆ.