ಕಾಯಕವೇ ಕೈಲಾಸ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ತತ್ವವನ್ನು ಬೋಧಿಸಿದ ಮಹಾನ್ ಮಾನವತಾವಾದಿ ಬಸವಣ್ಣ ಜಗತ್ತು ಕಂಡ ಅತ್ಯಂತ ಶ್ರೇಷ್ಟ ದಾರ್ಶನಿಕ.
ಇವನಾರವ…ಇವನಾರವ.ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ.. ನಮ್ಮವ ..ಎಂದೆನಿಸಯ್ಯಾ.. ಎಂದು ಹೇಳಿ ಎಲ್ಲರೂ ನಮ್ಮವರೆ ಎಂದು ಪ್ರತಿಪಾದಿಸುವ ಮೂಲಕ ಜಗತ್ತಿಗೆ ಸಮಾನತೆಯ ಮಂತ್ರ ಬೋಧಿಸಿದ ಬಸವಣ್ಣ ಹಿಂದೂ ಧರ್ಮದಲ್ಲಿನ ಕಂದಾಚಾರಗಳನ್ನು ಧಿಕ್ಕರಿಸಿ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯಾ ಎಂಬ ಆಶಯದ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು. ಹಿಂದೂ ಧರ್ಮದಲ್ಲಿ ಹಾಸು ಹೊಕ್ಕಾಗಿದ್ದ ಮೇಲು-ಕೀಳು ಎಂಬ ಜಾತಿ ತಾರತಮ್ಯವನ್ನು ಧಿಕ್ಕರಿಸಿದ ಹನ್ನೆರಡನೆ ಶತಮಾನದ ಈ ಧರ್ಮ ಕೆಲವೇ ದಿನಗಳಲ್ಲಿ ಜನಮೆಚ್ಚುಗೆ ಪಡೆದಿದ್ದು ಇದೀಗ ಇತಿಹಾಸ.
ಲಿಂಗ ಧರಿಸಿದವರೆಲ್ಲಾ ಲಿಂಗಾಯಿತರೆಂದ ಬಸವಣ್ಣನ ಧರ್ಮ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸಿದಾಗ ಅದಕ್ಕೆ ಬಲವಾದ ವಿರೋಧ ವ್ಯಕ್ತ ಪಡಿಸಿದ್ದು ಸಂಘ ಪರಿವಾರ.
ಕಳೆದ 2001 ಮತ್ತು 2011ರಲ್ಲಿ ನಡೆದ ಜನಗಣತಿಯ ವೇಳೆ ಲಿಂಗಾಯಿತರೆಲ್ಲಾ ತಮ್ಮದು ಲಿಂಗಾಯಿತ ಧರ್ಮ ಎಂದು ನಮೂದಿಸುವಂತೆ ದಿವಂಗತ ಮಾತೆ ಮಹಾದೇವಿ, ಎಂ.ಎಂ.ಕಲಬುರಗಿ ಸೇರಿದಂತೆ ಅನೇಕ ಮಠಾಧೀಶರು, ದಾರ್ಶನಿಕರು ಕರೆ ನೀಡಿದ್ದರು.ಕಾಂಗ್ರೆಸ್ ನ ಹಲವು ನಾಯಕರು ಈ ವಾದವನ್ನು ಬೆಂಬಲಿಸಿದ್ದರು.ಆದರೆ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಲಿಂಗಾಯಿತ ಧರ್ಮವಲ್ಲ ಅದೊಂದು ಹಿಂದೂ ಧರ್ಮದಲ್ಲಿನ ಜಾತಿ.ಎಲ್ಲಾ ಲಿಂಗಾಯಿತರು ಹಿಂದೂಗಳು ಎಂದು ಪ್ರತಿಪಾದಿಸಿದ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಂತೂ ಇದು ತೀವ್ರ ಸ್ವರೂಪ ಪಡೆದುಕೊಂಡಿತು. ರಾಜ್ಯ ಸರ್ಕಾರ ಲಿಂಗಾಯಿತ ಎನ್ನುವವುದು ಭಕ್ತಿ ಭಂಡಾರಿ ಬಸವಣ್ಣ ಸ್ಥಾಪಿತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸಿದರೆ,ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಇದನ್ನು ವಿರೋಧಿಸಿದ್ದು ಇದೀಗ ಇತಿಹಾಸ.
ಈಗ ಬಸವ ಜಯಂತಿಯಂದು ಬಸವಣ್ಣನ ಗುಣಗಾನ ನಡೆದಿದೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಸವಣ್ಣನ ವಚನಗಳು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳದಿದೆ.
ಈ ಟ್ವೀಟ್ ನಲ್ಲಿ ಗಡ್ಕರಿ ಅವರು ಬಸವಣ್ಣ ಅವರನ್ನು ಲಿಂಗಾಯಿತ ಧರ್ಮದ ಸ್ಥಾಪಕ ಎಂದು ಬಣ್ಣಿಸಿದ್ದಾರೆ.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಹಲವರು ಕೊನೆಗೂ ಸತ್ಯ ಹೊರ ಬಂದಿದೆ ಎಂದು ಹೇಳಿ ಗಡ್ಕರಿ ಅವರ ನಡೆಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಗಡ್ಕರಿ ಅವರು ಪ್ರತಿನಿಧಿಸುವ ನಾಗಪುರ ಲೋಕಸಭಾ ಕ್ಷೇತ್ರ ಹಾಗೂ ಅದರ ಆಸುಪಾಸಿನಲ್ಲಿ ಲಿಂಗಾಯಿತರು ದೊಡ್ಡ ಪ್ರಮಾಣದಲ್ಲಿದ್ದಾರೆ ಹೀಗಾಗಿ ಇವರ ಈ ಹೇಳಿಕೆ ಗಮನ ಸೆಳೆದಿದೆ.
ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ನಿತಿನ್ ಗಡ್ಕರಿ ಒಂದು ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಹೀಗಾಗಿ ಲಿಂಗಾಯಿತ ಧರ್ಮ ಎಂಬ ಇವರ ಟ್ವೀಟ್ ಇದೀಗ ಚರ್ಚೆಯ ವಿಷಯವಾಗಿದೆ.