ಬೆಂಗಳೂರು,ಮೇ.16- ಬಾಲ್ಯದಲ್ಲಿ ಸಣ್ಣಪುಟ್ಟ ಕಳ್ಳತನ ಆರಂಭಿಸಿ ದೊಡ್ಡವರಾದಂತೆ ಬೈಕ್ ಮೊಬೈಲ್ ಕಳವು ಮಾಡಿ ಬಂದ ಹಣದಿಂದ ಮೋಜು ಮಾಡುತ್ತಿದ್ದ ಮೂವರು ಖದೀಮರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಬಾಲ್ಯ ಸ್ನೇಹಿತರಾಗಿದ್ದ ವಿದ್ಯಾರಣ್ಯಪುರದ ನರಸೀಪುರ ಲೇಔಟ್ ನ ದರ್ಶನ್( 21), ದಿನೇಶ್(23), ಹಾಗು ಬೆಟ್ಟಹಳ್ಳಿಯ ಮಹದೇಶ್ವರ ಬಡಾವಣೆಯ ಜಾರ್ಜ್( 20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಬಂಧಿತರಿಂದ 1.5ಲಕ್ಷ ಮೌಲ್ಯದ 8 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ದರ್ಶನ್‍ನ ತಂದೆ ತಾಯಿ ಮೃತ ಪಟ್ಟಿದ್ದು ತನ್ನ ಸ್ನೇಹಿತರೊಂದಿಗೆ ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿ ಮೋಜಿನ ಜೀವನ ಮಾಡಿಕೊಂಡಿದ್ದು 2019 ರಲ್ಲಿ ತನ್ನ ಸ್ನೇಹಿತ ಲಕ್ಮಣ ಜೊತೆಗೆ ಸೇರಿ ಬೈಕ್ ಹಾಗು ಸ್ಕೂಟರ್ ಗಳನ್ನು ಕಳವು ಮಾಡಿ ಯಲಹಂಕ ಉಪ ನಗರ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದ ಬಳಿಕ ತಲೆಮರೆಸಿಕೊಂಡಿದ್ದ.
ಕಳೆದ ಐದಾರು ತಿಂಗಳಿನಿಂದ ಇನ್ನಿಬ್ಬರು ಬಂಧಿತ ಸ್ನೇಹಿತರ ಜೊತೆ ಸೇರಿ ಸ್ಕೂಟರ್ ಗಳನ್ನು ಪಡೆದು ಸುತ್ತಾಡುತ್ತಾ ಒಂಟಿಯಾಗಿ ಓಡಾಡುವರ ಮೊಬೈಲ್‍ಗಳನ್ನು ಸುಲಿಗೆ ಮಾಡುತ್ತಿದ್ದರು.
ಕಳೆದ ಮಾ.29ರಂದು ನಾಗೇನಹಳ್ಳಿ ರೈಲ್ವೆ ಗೇಟ್ ಬಳಿಯ ಶೋಭಾ ಅಪಾರ್ಟಮೆಂಟ್ ಮುಂಬಾಗದ ರಸ್ತೆಯಲ್ಲಿ ಸಂಜೆ 5ರ ವೇಳೆ ವಿದ್ಯಾರ್ಥಿನಿ ಲಕ್ಷ್ಮೀ ಕಾಲೇಜ್ ಮುಗಿಸಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಹೊಂಡಾ ಡಿಯೋದಲ್ಲಿ ಬಂದ ಆರೋಪಿಗಳು ಅವರ ಮೊಬೈಲ್‍ನ್ನು ಕಸಿದು ಪರಾರಿಯಾಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ
ಕಾರ್ಯಾಚರಣೆ ಕೈಗೊಂಡ ಯಲಹಂಕ ಉಪನಗರ ಇನ್ಸ್‌ಪೆಕ್ಟರ್ ಆನಂದ ನಾಯ್ಕ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.