ನವದೆಹಲಿ,ಸೆ.12-ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ಬಿಲ್ ಪಾಸ್ ಮಾಡಲು 15 ಲಕ್ಷ ರೂ.ಲಂಚ ಪಡೆದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಸಲಹೆಗಾರ ಸೇರಿ ಮೂವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುಗ್ರಾಮ್ ಮೂಲದ ಸಂಸ್ಥೆಯಾದ ವಾಯಂಟ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಎಂಜಿನಿಯರ್ ಅನಿಲ್ ಕುಮಾರ್ ಸಿಂಗ್ ಎಂಬುವವರೇ ಬಂಧಿತರು. ಮಥುರಾ ಮೂಲದ ಎಸ್‌ಆರ್‌ಎಸ್‌ಸಿ ಇನ್ಫ್ರಾ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿ ಆನಂದ್ ಮೋಹನ್ ಶರ್ಮಾ ಜೊತೆಗೆ 15 ಲಕ್ಷ ರೂ. ಲಂಚದ ಹಣವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾಗ ಸಿಂಗ್ ನನ್ನು ಬಂಧಿಸಲಾಗಿದೆ.
ಅಲ್ಲದೇ, ಎಸ್‌ಆರ್‌ಎಸ್‌ಸಿ ಇನ್‌ಫ್ರಾ ಸಂಸ್ಥೆಯ ಇಬ್ಬರು ನಿರ್ದೇಶಕರಾದ ಬೆದ್ರಂ ಶರ್ಮಾ ಮತ್ತು ಪರಶುರಾಮ್ ಶರ್ಮಾ ಎಂಬುವರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್, ಮಥುರಾ ಮತ್ತು ಗುರುಗ್ರಾಮ್, ನೋಯ್ಡಾ ಸೇರಿದಂತೆ ಆರೋಪಿಗಳಿಗೆ ಸೇರಿದ ಎಂಟು ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಅಂದಾಜು 1.56 ಕೋಟಿ ರೂಪಾಯಿ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ.
ಯೋಜನೆ ಮತ್ತು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮೊಬೈಲ್‌ಗಳು ಸೇರಿದಂತೆ ಡಿಜಿಟಲ್ ಸಾಧನಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 74ರ ಸಿತಾರ್‌ಗಂಜ್-ಬರೇಲಿ ವಿಭಾಗದಲ್ಲಿ ಎಸ್‌ಆರ್‌ಎಸ್‌ಸಿ ಇನ್ಫ್ರಾಗೆ ಯೋಜನೆಯೊಂದು ನೀಡಲಾಗಿತ್ತು. ಇದರ ಪ್ರಗತಿ ಮೇಲ್ವಿಚಾರಣೆ ಮಾಡಲು ಅನಿಲ್ ಕುಮಾರ್ ಸಿಂಗ್ ಅವರನ್ನು ಎನ್‌ಎಚ್‌ಎಐ ಸಲಹೆಗಾರರನ್ನಾಗಿ ನೇಮಿಸಿತ್ತು. ಆದರೆ, ಯೋಜನೆಯಡಿಯಲ್ಲಿ ಸಂಸ್ಥೆಯ ಬಿಲ್‌ಗಳನ್ನು ಪಾಸ್ ಮಾಡಲು ಸಿಂಗ್ ಎಸ್‌ಆರ್‌ಎಸ್‌ಸಿ ಇನ್ಫ್ರಾದಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಮಾಹಿತಿ ನೀಡಲಾಗಿದೆ.
Previous Articleಚಿತ್ರಕಲಾ ಪರಿಷತ್ ನಲ್ಲಿ India-Italy ಕಲಾ ಪ್ರದರ್ಶನ
Next Article ಮುಂದೈತೆ ಮಾರಿಹಬ್ಬ..!