ಬೆಂಗಳೂರು,ಜಿ.30:
ಬಿಜೆಪಿಯ ಪ್ರಭಾವಿ ನಾಯಕರಾದ ಮಾಜಿ ಮಂತ್ರಿ ಬಿ ಶ್ರೀರಾಮುಲು ಇದೀಗ ತಮ್ಮ ಒಂದು ಕಾಲದ ಆತ್ಮೀಯ ಗೆಳೆಯ ಮಾಜಿ ಮಂತ್ರಿ ಜನಾರ್ಧನ ರೆಡ್ಡಿ ಅವರೊಂದಿಗಿನ ತೀವ್ರ ಸ್ವರೂಪದ ಭಿನ್ನಮತದ ಪರಿಣಾಮವಾಗಿ ಬಿಜೆಪಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷರ ನೇಮಕದ ನಂತರ ಈ ಇಬ್ಬರ ನಡುವಿನ ಬಿಕ್ಕಟ್ಟು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ವರಿಷ್ಠರ ಸಂಧಾನಕ್ಕೂ ಸೊಪ್ಪು ಹಾಕದ ಶ್ರೀರಾಮುಲು ಪಕ್ಷಾಂತರಕ್ಕೆ ಸಜ್ಜುಗೊಂಡಿದ್ದು, ತಮ್ಮ ಬೆಂಬಲಿಗರ ಜೊತೆಯಲ್ಲಿ ಸಮಾಲೋಚನೆ ಆರಂಭಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಕಣಕ್ಕಿಳಿಯಲು ಚಿಂತನೆ ನಡೆಸಿರುವ ಅವರು ಇದಕ್ಕಾಗಿ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸದ್ಯ ಕೂಡ್ಲಗಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ಸಿನ ಎನ್ ವೈ ಗೋಪಾಲಕೃಷ್ಣ ಅವರು ಪ್ರತಿನಿಧಿಸುತ್ತಿದ್ದಾರೆ ಇವರು ಶ್ರೀರಾಮುಲು ಅವರಿಗೆ ದೂರದ ಸಂಬಂಧಿ ಆಗಿದ್ದಾರೆ ಅಲ್ಲದೆ 80ರ ಆಸುಪಾಸಿನಲ್ಲಿರುವ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಒಂದು ಕಾಲಕ್ಕೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆಯಾಗಿಸಿದ ಕೀರ್ತಿ ಶ್ರೀರಾಮುಲು ಅವರಿಗೆ ಸಲ್ಲುತ್ತದೆ ಆದರೆ ಪಕ್ಷದಲ್ಲಿ ಅವರಿಗೆ ಸೂಕ್ತ ಮಾನ್ಯತೆ ಸಿಗದ ಪರಿಣಾಮ ಇದೀಗ ಮತ್ತೆ ಬಳ್ಳಾರಿ ಕಾಂಗ್ರೆಸ್ಸಿನ ಭದ್ರಕೋಟೆಯಾಗುವತ್ತ ದಾಪುಗಾಲಿಟ್ಟಿದೆ. ಜಿಲ್ಲೆಯಲ್ಲಿ ಹಾಗೂ ಸಮುದಾಯದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಶ್ರೀರಾಮುಲು ಅವರನ್ನು ಈ ಸಮಯದಲ್ಲಿ ಕಾಂಗ್ರೆಸ್ಸಿಗೆ ಕರೆ ತಂದರೆ ಆ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಶಾಲಿಯಾಗುತ್ತದೆ ಎಂದು ಬಳ್ಳಾರಿಯ ಬಹುತೇಕ ಎಲ್ಲಾ ಕಾಂಗ್ರೆಸ್ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಸಂತೋಷ್ ಲಾಡ್ ಮಾಜಿ ಮಂತ್ರಿ ಬಿ ನಾಗೇಂದ್ರ ಸೇರಿದಂತೆ ಹಲವರು ಶ್ರೀರಾಮುಲು ಅವರನ್ನು ಕಾಂಗ್ರೆಸ್ ಸೇರ್ಪಡೆ ಮಾಡಲು ಹೆಚ್ಚು ಆಸಕ್ತಿ ವಹಿಸಿದ್ದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಹೆಚ್ಚು ಆಸಕ್ತಿ ವಹಿಸಿರುವ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರು ಬಿಕ್ಕಟ್ಟು ಶಮನ ಕುರಿತಂತೆ, ಬಿಜೆಪಿ ಹೈಕಮಾಂಡ್ ನಡೆಸಲು ಉದ್ದೇಶಿಸಿರುವ ಸಂಧಾನ ಮಾತುಕತೆಯಿಂದ ದೂರ ಉಳಿದಿದ್ದಾರೆ.
ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತಂತೆ ಬೆಂಬಲಿಗರ ಜೊತೆ ಸತತ ಸಮಾಲೋಚನೆಯಲ್ಲಿ ತೊಡಗಿರುವ ಅವರು ಸದ್ಯದಲ್ಲೇ ಬಳ್ಳಾರಿಯಲ್ಲಿ ವಾಲ್ಮೀಕಿ ಸಮುದಾಯದ ಸ್ವಾಭಿಮಾನಿ ಸಮಾವೇಶ ಆಯೋಜಿಸಲು ಚಿಂತನೆ ನಡೆಸಿದ್ದಾರೆ ಈ ಸಮಾವೇಶದ ಮೂಲಕ ಬಿಜೆಪಿ ವಾಲ್ಮೀಕಿ ಸಮುದಾಯದ ವಿರೋಧಿಯಾಗಿದೆ ಎಂದು ಬಿಂಬಿಸಿ ಕಾಂಗ್ರೆಸ್ ಸೇರ್ಪಡೆಯ ನಿರ್ಧಾರ ಘೋಷಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.