ಬೆಂಗಳೂರು,ಮೇ.22:
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದ್ದು ಎಲ್ಲೆಡೆ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ನಿರತವಾಗಿರುವ ಬೆನ್ನೆಲ್ಲೇ ಆಡಳಿತರೂಢ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಗುಪ್ತದಳ ವರದಿ ನೀಡಿದೆ.
ಇದರ ಜೊತೆಗೆ ಪಕ್ಷ ಮತ್ತು ಸರ್ಕಾರ ಪ್ರತ್ಯೇಕವಾಗಿ ನಡೆಸಿರುವ ಖಾಸಗಿ ಸಮೀಕ್ಷೆ ವರದಿಗಳೂ ಕೂಡ ಕಾಂಗ್ರೆಸ್ 18 ರಿಂದ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂಬ ವರದಿಗಳನ್ನು ನೀಡಿದ್ದು ಇದು ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ಗ್ಯಾರಂಟಿಗಳು ಮತ್ತು ಬಿಜೆಪಿಯೊಳಗಿನ ಭಿನ್ನಮತ ಮತದಾರರು ಕಾಂಗ್ರೆಸ್ ಕೈ ಹಿಡಿಯುವಂತೆ ಮಾಡಿದ್ದು ಇದೇ ಆಧಾರದಲ್ಲಿ ನೆನೆಗುಡಿಗೆ ಬಿದ್ದಿರುವ ಜಿಲ್ಲಾ ತಾಲೂಕು ಪಂಚಾಯಿತಿ ಮತ್ತು ನಗರ
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಪಕ್ಷ ಚಿಂತನೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಲ್ಲಾ ಸಚಿವರಿಗೆ ಔತಣ ಕೂಟ ಆಯೋಜಿಸಿದ್ದಾರೆ. ಇದರಲ್ಲಿ ಪ್ರತಿಯೊಂದು ಜಿಲ್ಲೆಯ ಮತದಾನದ ವರದಿ ಪಡೆಯಲಿದ್ದಾರೆ.
ಲೋಕಸಭೆ ಚುನಾವಣೆ ಹೊರಬಿದ್ದ ತಕ್ಷಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಕುರಿತಂತೆ ಎಲ್ಲಾ ಸಚಿವರ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದ್ದು, ಎಲ್ಲಾ ಸಚಿವರಿಗೂ ಸಂಬಂಧಪಟ್ಟ ಜಿಲ್ಲೆಯ ಜವಾಬ್ದಾರಿ ಹಂಚಿಕೆ ಮಾಡಲು ಚಿಂತನೆ ನಡೆದಿದೆ.
ಪರಿಷತ್ ಪೈಪೋಟಿ:
ವಿಧಾನಸಭೆಯಿಂದ ರಾಜ್ಯ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆದಿರುವ ಚುನಾವಣೆ ಕುರಿತಂತೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 7 ಸ್ಥಾನಗಳು ಸುಲಭವಾಗಿ ಲಭಿಸಲಿದ್ದು, ಜೆಡಿಎಸ್ ಮತ್ತು ಬಿಜೆಪಿಯಲ್ಲಿನ ಒಡಕಿನ ಲಾಭ ಪಡೆದರೆ ಮತ್ತೊಂದು ಸ್ಥಾನ ಕೂಡ ಲಭಿಸಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಸಿಗಲಿರುವ ಏಳು ಸ್ಥಾನಗಳಿಗೆ ಸುಮಾರು ಐವತ್ತಕ್ಕೂ ಹೆಚ್ಚು ಜನ ಪೈಪೋಟಿ ನಡೆಸುತ್ತಿದ್ದಾರೆ. ಈ ಬಾರಿ ಜಾತಿವಾರು, ಹಿರಿತನ, ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ವಂಚಿತರಿಗೆ ಅವಕಾಶ ಮಾಡಿಕೊಡುವ ಕಾರಣ ಅನೇಕ ಹಿರಿಯ ಮುಖಂಡರು ಸದ್ದಿಲ್ಲದೆ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲ ಮಂತ್ರಿಗಳ ಅಭಿಪ್ರಾಯ ಆಲಿಸಲಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಾಮಾಜಿಕ ನ್ಯಾಯ ಪ್ರಾದೇಶಿಕ ಸಮತೋಲನ ಹಾಗೂ ಪಕ್ಷದಲ್ಲಿ ನಿಷ್ಠಾವಂತರಿಗೆ ಆದ್ಯತೆ ನೀಡಲು ಹೈಕಮಾಂಡ್ ನೀಡಿರುವ ಸೂಚನೆಯ ಬಗ್ಗೆ ವಿವರಿಸಲಿದ್ದಾರೆ ಎಂದು ಗೊತ್ತಾಗಿದೆ.
ಕಾಂಗ್ರೆಸ್ ಗೆ ಸಿಗಲಿರುವ ಏಳು ಸ್ಥಾನಗಳಲ್ಲಿ ತಲಾ ಒಂದು ಸ್ಥಾನ ಪಂಚಮಸಾಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಬಲಗೈ, ಬೋವಿ ಮತ್ತು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.
ಮಂತ್ರಿಗಳೊಂದಿಗೆ ಸಿಎಂ ಮತ್ತು ಡಿಸಿಎಂ ಡಿನ್ನರ್ ಮೀಟಿಂಗ್.
Previous Articleರಾಹುಲ್ ಗಾಂಧಿಗೆ ಸಮನ್ಸ್ ನೀಡಲು ಜೆಡಿಎಸ್ ಆಗ್ರಹ
Next Article ಫೋನ್ ಕದ್ದಾಲಿಕೆ ಬಗ್ಗೆ ದೂರು ಸಲ್ಲಿಸಲು ಡಿಸಿಎಂ ಸೂಚನೆ.