ಬೆಂಗಳೂರು,ಜು.10:
ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ದೆಹಲಿಯಿಂದಲೇ ಸಂದೇಶ ರವಾನಿಸಿದ ಬೆನ್ನಲ್ಲೇ ಅವರ ಆಪ್ತಬಣದ ಮಂತ್ರಿಗಳು ಬೆಂಗಳೂರಿನಲ್ಲಿ ಸಕ್ರಿಯರಾದರು.
ದೆಹಲಿಯಲ್ಲಿ ಬೀಡು ಬಿಟ್ಟಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ ಅದಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಈ ಬೆಳವಣಿಗೆಗಳ ನಡುವೆ ಗೃಹ ಸಚಿವ ಪರಮೇಶ್ವರ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ, ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಎಲ್ಲಾ ನಾಯಕರು ನಾಯಕತ್ವ ಬದಲಾವಣೆ ಕುರಿತಂತೆ ಕೆಲವು ಶಾಸಕರು ಮತ್ತು ಮಂತ್ರಿಗಳು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಹೈಕಮಾಂಡ್ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ ಇದರಿಂದಾಗಿ ಆಡಳಿತ ಈ ಯಂತ್ರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಾಯಕತ್ವ ಬದಲಾವಣೆ ಕುರಿತಂತೆ ಹೈಕಮಾಂಡ್ ಸ್ಪಷ್ಟವಾಗಿ ತಮ್ಮ ತೀರ್ಮಾನವನ್ನು ಪ್ರಕಟಿಸಬೇಕು ಹಾಗೆ ಪಕ್ಷದ ಯಾವುದೇ ಶಾಸಕರು ಮತ್ತು ಮಂತ್ರಿಗಳು ಈ ಕುರಿತಾಗಿ ಬಹಿರಂಗ ಹೇಳಿಕೆ ನೀಡಿದಂತೆ ಕಟ್ಟಾಜ್ಞೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಚರ್ಚೆಯ ವೇಳೆ ಮಧ್ಯ ಪ್ರವೇಶಿಸಿದ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರು, ಅಧಿಕಾರ ಹಸ್ತಾಂತರ ಕುರಿತಾಗಿ ಹೈಕಮಾಂಡ್ ಮಟ್ಟದಲ್ಲಿ ಸಂದಾನ ಸೂತ್ರ ಏರ್ಪಟ್ಟಿದ್ದರೆ ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಆದರೆ ನಾಯಕತ್ವ ಬದಲಾವಣೆಯಾಗುವುದಾದರೆ ತಾವು ರಾಜ್ಯ ರಾಜಕಾರಣಕ್ಕೆ ಆಗಮಿಸಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಕಾಂಗ್ರೆಸ್ ಪಕ್ಷದ ಮೇಲಿರುವ ತಮ್ಮ ನಿಷ್ಠೆ ಹಾಗೂ ಅನುಭವದ ಆಧಾರದಲ್ಲಿ ಎಂದೋ ಈ ಹುದ್ದೆಯನ್ನು ಅಲಂಕರಿಸಬೇಕಾಗಿತ್ತು ಆದರೆ ಹಲವಾರು ಕಾರಣಗಳಿಂದ ಇದು ಸಾಧ್ಯವಾಗಿಲ್ಲ ಇದಕ್ಕೆ ಸಕಾಲವಾಗಿದೆ ತಾವು ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಮೂಲಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ನಾಯಕರೊಬ್ಬರು ಉನ್ನತ ಹುದ್ದೆಗೇರಿದ ಇತಿಹಾಸ ನಿರ್ಮಿಸಬೇಕು ಎಂದು ಮನವಿ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಇದಕ್ಕೆ ಸಚಿವರಾದ ಈಶ್ವರ ಖಂಡ್ರೆ ಮಹಾದೇವಪ್ಪ ಮತ್ತು ದಿನೇಶ್ ಗುಂಡೂರಾವ್ ದನಿಗೂಡಿಸಿದ್ದಾರೆ ಆದರೆ ಯಾವುದೇ ಪ್ರಸ್ತಾಪ ಕುರಿತಂತೆ ಚಕಾರ ಎತ್ತದ ಮಲ್ಲಿಕಾರ್ಜುನ ಖರ್ಗೆ ಅವರು ಈ ಎಲ್ಲವನ್ನು ಕೇಳಿಸಿಕೊಂಡು ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ ನಮಗೆ ಎಲ್ಲಾ ವರದಿಗಳಿವೆ ಸದ್ಯದಲ್ಲೇ ಗೊಂದಲಗಳಿಗೆ ತೆರೆ ಎಳೆಯುತ್ತೇವೆ ದಯವಿಟ್ಟು ಯಾರು ಬಹಿರಂಗವಾಗಿ ಮಾತನಾಡಬೇಡಿ ನಾನು ಈಗ ದೆಹಲಿಗೆ ಹೊರಡುತ್ತಿದ್ದೇನೆ ಎಂದು ಹೇಳಿ ಹೊರ ನಡೆದರು ಎಂದು ಗೊತ್ತಾಗಿದೆ.
ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?
Previous Articleದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?
Next Article ಡಿ ಬಾಸ್ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಕೆ ಆಗೋಲ್ಲ!