ಬೆಂಗಳೂರು,ಮೇ.9- ಮಗನ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗದಿದ್ದರಿಂದ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಗ್ಗಲಿಪುರದಲ್ಲಿ ಸಂಭವಿಸಿದೆ.
ಕನಕಪುರ ರಸ್ತೆ ಗಿರಿಗೌಡನದೊಡ್ಡಿ ಗ್ರಾಮದ ತೇಜಸ್ವಿನಿ(35)ಆತ್ಮಹತ್ಯೆ ಮಾಡಿಕೊಂಡವರು.
ಮೃತ ತೇಜಸ್ವಿನಿ ಅವರು ಶ್ರೀಕಂಠ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೋಳಿ ಸಾಕಣೆ ಕೇಂದ್ರ ನಡೆಸುತ್ತಿದ್ದ ಶ್ರೀಕಂಠ, ಇತ್ತೀಚೆಗೆ ನಷ್ಟ ಅನುಭವಿಸಿ ವ್ಯವಸಾಯ ಮಾಡುತ್ತಿದ್ದರು. ಕಳೆದ ಮೇ 6ರಂದು ಮಗನ 2ನೇ ವರ್ಷದ ಹುಟ್ಟುಹಬ್ಬವಿತ್ತು. ಹಣಕಾಸಿನ ತೊಂದರೆಯಿಂದ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ.
ಮಗನ ಹುಟ್ಟುಹಬ್ಬ ಆಚರಣೆ ಮಾಡಲು ಆಗದೆ ತಂದೆ ಶ್ರೀಕಂಠ, ಕೆಲಸ ನಿಮಿತ್ತ ಮೈಸೂರಿಗೆ ಹೋಗಿ ಬರುವುದಾಗಿ ಪತ್ನಿಗೆ ಹೇಳಿ ಹೋಗಿದ್ದರು. ಮಗನ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಾಗಿಲ್ಲ, ಎಂಥ ಸ್ಥಿತಿ ಬಂತು ಎಂದು ನೊಂದುಕೊಂಡ ತೇಜಸ್ವಿನಿ ನೇಣಿಗೆ ಶರಣಾಗಿದ್ದಾರೆ. ಕಗ್ಗಲಿಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.