ಮುಂಬಯಿ: ಇಲ್ಲಿನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಟಾಟಾ ಐಪಿಎಲ್‌ನ 58ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಮಾರ್ಷ್-ವಾರ್ನರ್ ಶತಕದ ಜತೆಯಾಟದ ಮುಂದೆ ಸಂಜು ಸ್ಯಾಮ್ಸನ್ ತಂತ್ರ ಫಲಿಸಲಿಲ್ಲ.
ಟಾಸ್ ಗೆದ್ದ ಡೆಲ್ಲಿ ಎದುರಾಳಿಯನ್ನು ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಆರಂಭಿಕರನ್ನು ಬೇಗನೆ ಕಳೆದುಕೊಂಡ ರಾಜಸ್ಥಾನಕ್ಕೆ ಆಸರೆಯಾಗಿದ್ದು ರವಿಚಂದ್ರ ಅಶ್ವಿನ್ (50 ರನ್, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ದೇವದತ್ತ ಪಡಿಕ್ಕಲ್ (48 ರನ್, 30 ಎಸೆತ, 2 ಬೌಂಡರಿ, 2 ಸಿಕ್ಸರ್). ಆ ಬಳಿಕ ತಂಡವು ಮತ್ತೆ ಕುಸಿತ ಕಂಡಿದ್ದರಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್‌ಗಳ ಸಾಧಾರಣ ಮೊತ್ತವನ್ನು ಗಳಿಸಲಷ್ಟೇ ಶಕ್ತವಾಯಿತು. ಚೇತನ್ ಸಕಾರಿಯಾ, ಆನ್ರಿಚ್ ನೋರ್ಜೆ ಮತ್ತು ಮಾರ್ಷ್ ತಲಾ ಎರಡು ವಿಕೆಟ್ ಗಳಿಸಿದರು.
ಡೆಲ್ಲಿಯ ಆರಂಭವೂ ಉತ್ತಮವಾಗಿರಲಿಲ್ಲ. ಮೊದಲ ವಿಕೆಟ್ ಶೂನ್ಯಕ್ಕೇ ಉದುರಿತು. ಬಳಿಕ ಕ್ರೀಸ್‌ಗೆ ಆಗಮಿಸಿದ ಮಿಶೆಲ್ ಮಾರ್ಷ್ ಒಂದು ಬದಿಯಲ್ಲಿ ಅಬ್ಬರಿಸುತ್ತ ಸಾಗಿದರು. ಶತಕವಂಚಿತರಾದರೂ 89 ರನ್ ಚಚ್ಚಿ, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 62 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ ಮತ್ತು 7 ಸಿಕ್ಸರ್ ಬಡಿದಟ್ಟಿದ್ದರು. ಮತ್ತೊಂದು ತುದಿಯಲ್ಲಿ ತಾಳ್ಮೆಯಿಂದ ಆಟವಾಡಿದ ಡೇವಿಡ್ ವಾರ್ನರ್ ಕೂಡ ಆಜೇಯ ಅರ್ಧ ಶತಕದೊಂದಿಗೆ (52 ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್) ಗೆಲುವನ್ನು ಸಂಭ್ರಮಿಸಿದರು. ಅಲ್ಲದೆ, ಐಪಿಎಲ್‌ನ ಒಟ್ಟು 8 ಋತುಗಳಲ್ಲಿ 400ಕ್ಕಿಂತ ಹೆಚ್ಚಿನ ರನ್‌ಗಳನ್ನು ಬಾರಿಸಿದ ಸಾಧನೆಯನ್ನೂ ಮಾಡಿದರು. ಕೊನೆಗಳಿಗೆಯಲ್ಲಿ ಅಬ್ಬರಿಸಿದ ನಾಯಕ ರಿಷಭ್ ಪಂತ್ ಕೇವಲ 4 ಎಸೆತಗಳನ್ನು ಎರಡು ಸಿಕ್ಸರ್ ಸಹಿತ 13 ರನ್ ದೋಚಿದರಲ್ಲದೆ, ತಂಡವು ಕೇವಲ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವಂತೆ ಮಾಡಿದರು. ಈ ಗೆಲುವಿನೊಂದಿಗೆ ಡೆಲ್ಲಿ 12 ಪಂದ್ಯಗಳಲ್ಲಿ 12 ಅಂಕಗಳನ್ನು ಸಂಪಾದಿಸಿ, ಐದನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ಅಷ್ಟೇ ಸಂಖ್ಯೆಯ ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿ ಆರ್‌ಸಿಬಿಯೊಂದಿಗೆ ಮೂರನೇ ಸ್ಥಾನವನ್ನು ಹಂಚಿಕೊಂಡಿದೆ.
ಗುರುವಾರದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ತಳದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿವೆ.
ಮಾರ್ಷ್-ವಾರ್ನರ್ ಅಬ್ಬರಕ್ಕೆ ಮಂಕಾದ ರಾಜಸ್ಥಾನ ರಾಯಲ್ಸ್
Previous Articleಮೆಗ್ಗಾನ್ ಸ್ಥಿತಿ ಎಲ್ಲಿಗೆ ಬಂತು…??
Next Article ಕೊಂಚ ಎಡವಿದ್ರಾ ಪರಶುರಾಮ್..??