ಮೈಸೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿಯಿಂದ ಚಿನಾವಣಾ ಅಖಾಡಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಹಾಲಿ ಸಂಸದ ಪ್ರತಾಪಸಿಂಹ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರತಾಪಸಿಂಹ ಅವರಿಗೆ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡಿ, ಗೆದ್ದರೆ ಅವರನ್ನು ಮಂತ್ರಿ ಮಾಡುವ ಭರವಸೆಯನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಪ್ರತಾಪಸಿಂಹ ಅವರೂ ಇದಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ.
ಯದುವೀರ್ ಅವರ ತಾಯಿ ಪ್ರಮೋದಾ ದೇವಿ ಒಡೆಯರ್ ಅವರು ರಾಜ್ಯಸಭಾ ಸದಸ್ಯರಾಗಲು ಒಲವು ವ್ಯಕ್ತಪಡಿಸಿದ್ದರಾದರೂ ಬಿಜೆಪಿ ನಾಯಕರು ಇದಕ್ಕೆ ಒಪ್ಪಿಲ್ಲ. ಹೀಗಾಗಿ ಯದುವೀರ್ ಅವರನ್ನೇ ಬಿಜೆಪಿಯಿಂದ ಕಣಕ್ಕಿಳಿಸಲು ಪ್ರಮೋದಾದೇವಿ ನಿರ್ಧರಿಸಿದ್ದಾರೆ ಎಂಬ ದಟ್ಟ ವದಂತಿ ರಾಜಕೀಯ ವಲಯದಲ್ಲಿ ಮೂಡಿದೆ.
ಹೀಗಾಗಿಯೇ ಯದುವೀರ್ ಅವರು ಆರ್‌ಎಸ್ಎಸ್ ಪರ ಮೃದು ಧೋರಣೆ ತಳೆದಿದ್ದು, ಬಹಿರಂಗವಾಗಿಯೇ ಹಿಂದುತ್ವ ಪರ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. ಪ್ರತಾಪಸಿಂಹ ಸಂಸದರಾಗಿದ್ದರೂ ಹೆಚ್ಚು ಜನಪ್ರಿಯರಾಗಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದ್ದು, ಮತ್ತೆ ಅವರನ್ನೇ ಕಣಕ್ಕಿಳಿಸಿದರೆ ಸೋಲಾಗಬಹುದು ಎಂಬ ತರ್ಕವೂ ಯದುವೀರ್ ಓಲೈಕೆಗೆ ಕಾರಣವಾಗಿದೆ.
ಸದ್ಯದ ಸ್ಥಿತಿಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೊಸ ಮುಖದ ಅನ್ವೇಷಣೆಯಲ್ಲಿರುವ ಬಿಜೆಪಿಗೆ ಪ್ರಮುಖವಾಗಿ ಯದುವೀರ್ ಅವರೇ ಕಾಣುತ್ತಿದ್ದಾರೆ. ಇದೇ ವೇಳೆ ರಾಜಕೀಯ ಪ್ರವೇಶಿಸುವ ಹಂಬಲ ಯದುವೀರ್ ಒಡೆಯರ್ ಅವರಲ್ಲೂ ಇದೆ.
ಹೀಗಾಗಿ ಅಭ್ಯರ್ಥಿ ಬದಲಾವಣೆ ಸುಲಭವಾದಂತಾಗಿದೆ ಎಂದು ಮೂಲಗಳು ಹೇಳಿವೆ.
ಯದುವೀರ್ ಅವರನ್ನು ರಾಜಕೀಯ ಕಣಕ್ಕಿಳಿಸಲು ಬಿಜೆಪಿ ಸೇರಿದಂತೆ ಈ ಹಿಂದೆ ವಿವಿಧ ಪಕ್ಷಗಳು ಆಸಕ್ತಿ ವಹಿಸಿದ್ದವಾದರೂ ಯದುವೀರ್ ಅವರೇ ರಾಜಕೀಯದಿಂದ ದೂರ ಇರುವುದಾಗಿ ಹೇಳಿದ್ದರು. ಆದರೂ ರಾಜಕೀಯ ಹೇಳಿಕೆಗಳನ್ನು ನೀಡುತ್ತ ರಾಜಕಾರಣದ ಮೇಲಿನ ಒಲವನ್ನು ವ್ಯಕ್ತಪಡಿಸುತ್ತಲೇ ಇದ್ದರು.
ಅಲ್ಲದೆ, ಯದುವೀರ್ ಅವರ ಪತ್ನಿ ತ್ರಿಷಿಕಾ ಕುಮಾರಿ ರಾಜಸ್ಥಾನದ ದಂಗರ್‌ಪುರ ರಾಜಮನೆತನದಿಂದ ಬಂದವರಾಗಿದ್ದು, ಈ ಮನೆತನದ ಹಲವರು ರಾಜಕೀಯ ನಂಟು ಹೊಂದಿದ್ದಾರೆ. ಕೆಲವರು ಶಾಸಕರು, ಸಂಸದರೂ ಆಗಿದ್ದಾರೆ. ದಂಗರ್‌ಪುರ ರಾಜಮನೆತನಕ್ಕಿಂತ ಹೆಚ್ಚು ದೊಡ್ಡದು ಹಾಗು ಪ್ರಭಾವಶಾಲಿಯಾಗಿರುವ ಮೈಸೂರು ರಾಜಮನೆತನದ ಯದುವೀರ್ ಅವರೂ ರಾಜಕೀಯ ಪ್ರವೇಶಿಸಬೇಕೆಂಬ ಒತ್ತಡ ತ್ರಿಷಿಕಾಕುಮಾರಿ ಒಡೆಯರ್ ಸೇರಿದಂತೆ ತವರುಮನೆ ಕಡೆಯಿಂದ ಇತ್ತು ಎನ್ನಲಾಗಿದೆ.
ಈ ಒತ್ತಡಕ್ಕೆ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ್ ಮಣಿದಿದ್ದು, ಮುಂದಿನ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಬಿಜೆಪಿ ನಾಯಕರು ಮೈಸೂರು ರಾಜಮನೆತನಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮನ್ನಣೆಯನ್ನೇ ನೀಡುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವರೂ ಆಗಾಗ ಮೈಸೂರು ಅರಮನೆಯತ್ತ ಮುಖ ಮಾಡುತ್ತಿರುವುದು ಇಂತಹ ವದಂತಿಗಳಿಗೆ ಪುಷ್ಟಿ ನೀಡಿದೆ.
Previous Articleರಾಷ್ಟ್ರಗೀತೆ ಹಾಡೋದನ್ನ ಮುತಾಲಿಕ್ ಕಲಿಸಬೇಕಾ..??
Next Article ಹೊರಟ್ಟಿ ಇನ್ಮೇಲೆ ಬಿಜೆಪಿಗೆ…