ಬೆಂಗಳೂರು,ಮೇ.19– ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸೋದರನಿಂದ ಪತ್ನಿಗೆ ಕಿರುಕುಳ ನೀಡಿರುವ ಸಂಬಂಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರವಿ ಚೆನ್ನಣ್ಣನವರ್ ಸಹೋದರ ರಾಘವೇಂದ್ರ ಡಿ.ಚೆನ್ನಣ್ಣನವರ್ ವಿರುದ್ಧ ಚಂದ್ರ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಕಳೆದ 2015ರಲ್ಲಿ ರೋಜಾ ಮತ್ತು ರಾಘವೇಂದ್ರ ಚನ್ನಣ್ಣನವರ್ ಮದುವೆಯಾಗಿದ್ದು, ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆಯೊಂದಿಗೆ ರಾಘವೇಂದ್ರ ಮದುವೆಯಾಗಿದ್ದು, ಈ ವಿಷಯವನ್ನು ಮುಚ್ಚಿಟ್ಟಿದ್ದರು. ಮದುವೆಯಾದ ಒಂದೇ ವರ್ಷದಲ್ಲಿ ರೋಜಾ ಅವರನ್ನು ಬಿಟ್ಟಿದ್ದು, ಮೊದಲು ಮದುವೆಯಾಗಿದ್ದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಹೀಗೆ ಮಾಡುತ್ತಾನೆ, ಮುಂದೆ ಎಲ್ಲ ಸರಿಹೋಗುತ್ತದೆ. ನೀನು ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಎಂದು ರವಿ ಚೆನ್ನಣ್ಣನವರು ಹೇಳಿದ್ದರೆಂದು ರೋಜಾ ದೂರು ನೀಡಿದ್ದಾರೆ. ಇಬ್ಬರ ಜೊತೆಗೆ ಸಂಸಾರ ಮಾಡುವುದಾಗಿ ರಾಘವೇಂದ್ರ ಹೇಳಿದ್ದಾರೆ. ತನಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆಗೆ ರೋಜಾ ದೂರು ನೀಡಿದ್ದು, ಅದರನ್ವಯ ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ.