ಬೆಂಗಳೂರು,ಜೂ.4:
ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗೊತ್ತಿ ಪಕ್ಷ ಸಂಘಟನೆಯತ್ತ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ಸಿನಲ್ಲಿ ಅಧಿಕಾರಕ್ಕಾಗಿ ಈಗಾಗಲೇ ಬಿಕ್ಕಟ್ಟು ಆರಂಭವಾಗಿದೆ ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಉಲ್ಬಣಗೊಳ್ಳಲಿದ್ದು, ಸರ್ಕಾರ ಪತನ ಹೊಂದಲಿದೆ. ಹೀಗಾಗಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದ್ದು ಈಗಿನಿಂದಲೇ ತಯಾರಿ ನಡೆಸುವಂತೆ ತಾಕೀತು ಮಾಡಿದ್ದಾರೆ.
ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಡ್ಡಾ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಉಭಯ ನಾಯಕರು ರಾಜ್ಯದಲ್ಲಿ ತಾವು ಕೈಗೊಂಡಿರುವ ಹಲವು ಹೋರಾಟಗಳ ಬಗ್ಗೆ ವಿವರಣೆ ನೀಡಿದರು. ಮಂಗಳೂರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮತ್ತು ಕಲಬುರ್ಗಿಯ ಘಟನೆಗಳ ಬಗ್ಗೆ ವಿವರವಾಗಿ ತಿಳಿಸಿದ ಈ ನಾಯಕರು ಸಂಘಟನಾತ್ಮಕವಾಗಿ ನಡೆಸುತ್ತಿರುವ ಈ ಹೋರಾಟಕ್ಕೆ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಜನಾಕ್ರೋಶ ಯಾತ್ರೆ ನಿರೀಕ್ಷಿತ ರೀತಿಯ ಫಲಿತಾಂಶ ತಂದು ಕೊಟ್ಟಿಲ್ಲ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ರೂಪಿಸಿದ ಈ ಯಾತ್ರೆ ಬಿಜೆಪಿಯ ಆಂತರಿಕ ಭಿನ್ನಮತವನ್ನು ಬಹಿರಂಗ ಪಡಿಸಿದೆ ಯಾತ್ರೆಯಾಗಿ ಪರಿಣಮಿಸಿದೆ. ಬಹುತೇಕ ಕಡೆ ಪಕ್ಷದ ಆಂತರಿಕ ವಿದ್ಯಮಾನಗಳು ವಿಜೃಂಭಿಸುವ ಮೂಲಕ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದೆ ಇದರ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ ಎಂದು ಹೇಳಿದ್ದಾರೆನ್ನಲಾಗಿದೆ.
ಪ್ರಮುಖವಾಗಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರ ನಡುವೆ ಸಮನ್ವಯತೆ ಹಾಗೂ ಹೊಂದಾಣಿಕೆ ಇಲ್ಲದಿರುವುದು ಎಲ್ಲಾ ಕಡೆ ಎದ್ದು ಕಾಣುತ್ತಿದೆ ಇದರಿಂದ ಕಾರ್ಯಕರ್ತರು ಕೂಡ ಗೊಂದಲಕ್ಕೆ ಬಿದ್ದಿದ್ದಾರೆ. ಹೀಗೆ ಮುಂದುವರೆದಿದ್ದೇ ಆದಲ್ಲಿ ಪಕ್ಷ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು ಎನ್ನಲಾಗಿದೆ.
ಇಬ್ಬರು ನಾಯಕರು ಪರಸ್ಪರ ಒಟ್ಟಿಗೆ ಕುರಿತು ಕಾರ್ಯಕ್ರಮಗಳನ್ನು ರೂಪಿಸಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಇರುವ ತೊಂದರೆಯಾದರೂ ಏನಾಗಿದೆ. ಪಕ್ಷ ಕೇಂದ್ರ ಮಟ್ಟದಲ್ಲಿ ಅತ್ಯಂತ ಪ್ರಬಲವಾಗಿದ್ದು ಕೇಂದ್ರ ಸರ್ಕಾರ ಕೂಡ ನಮ್ಮದೇ ಆಗಿದೆ ಹೀಗಿದ್ದರೂ ಕೂಡ ರಾಜ್ಯದಲ್ಲಿ ಯಾವುದೇ ರೀತಿಯ ಪರಿಣಾಮ ಉಂಟಾಗುತ್ತಿಲ್ಲ ಪಕ್ಷ ಸಂಘಟನೆ ಸೊರಗಿ ಹೋಗಿದೆ ಎಂದು ತರಾಟೆಗೆ ತೆಗೆದುಕೊಂಡಿರುವದಾಗಿ ತಿಳಿದು ಬಂದಿದೆ.
ಕೇಂದ್ರ ಸರ್ಕಾರ ಅತ್ಯಂತ ಯಶಸ್ವಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಇದರ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಇದು ತಮ್ಮ ಸಾಧನೆ ಎಂದು ಬಿಂಬಿಸುತ್ತಿದೆ ಇದಕ್ಕೆ ತಕ್ಕ ಎದಿರೇಟು ನೀಡುವಲ್ಲಿ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಹಿಡಿದುಕೊಂಡು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರೂ ರಾಜ್ಯದ ಯಾವುದೇ ನಾಯಕರು ಅದಕ್ಕೆ ತಕ್ಕ ತಿರುಗೇಟು ನೀಡಲಿಲ್ಲ ಇದಕ್ಕಾಗಿ ಕೇಂದ್ರದಿಂದ ನಾಯಕರು ಬಂದು ಉತ್ತರ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು ಹೀಗೆ ಆದಲ್ಲಿ ವಿಧಾನಸಭೆ ಚುನಾವಣೆಯನ್ನು ಯಾವ ರೀತಿ ಎದುರಿಸುತ್ತೀರಿ ಎಂದು ಪ್ರಶ್ನಿಸಿರುವುದಾಗಿ ತಿಳಿದು ಬಂದಿದೆ.
ಸದ್ಯ ರಾಜ್ಯ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಉಲ್ಬಣಿಸಿದ್ದು ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಹೀಗಾಗಿ ಕೇಂದ್ರ ಬಿಜೆಪಿ ನಾಯಕತ್ವ ಮಧ್ಯಂತರ ಚುನಾವಣೆಯನ್ನು ಎದುರು ನೋಡುತ್ತಿದೆ. ಅದಕ್ಕೆ ತಕ್ಕಂತೆ ರಾಜ್ಯ ನಾಯಕರು ತಯಾರಿ ನಡೆಸಬೇಕು ಪಕ್ಷದಲ್ಲಿ ಬದಲಾವಣೆಗಳು ಅಗತ್ಯವಿದ್ದರೆ ಕಾಲದಿಂದ ಕಾಲಕ್ಕೆ ಅದನ್ನು ರಾಷ್ಟ್ರೀಯ ನಾಯಕತ್ವ ನೋಡಿಕೊಳ್ಳಲಿದೆ ಇನ್ನೊಂದು ತಿಂಗಳಲ್ಲಿ ಹೊಸಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದು ಅಷ್ಟರಲ್ಲಿ ನೀವು ನಿಮ್ಮ ಗೊಂದಲಗಳನ್ನು ಸರಿಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.