ಬೆಂಗಳೂರು,ಡಿ.21:
ಭಾರತೀಯ ಕ್ರಿಕೆಟ್ ನಲ್ಲಿ ಭರ್ಜರಿ ಹೊಡೆತಗಳ ಮೂಲಕ ಗಮನ ಸೆಳೆದ ಕ್ರಿಕೆಟಿಗ ಕೊಡಗಿನ ಕುವರ ರಾಬಿನ್ ಉತ್ತಪ್ಪ ಆಟದ ಮೈದಾನದಲ್ಲಿ ಸುದ್ದಿ ಮಾಡಿದ್ದಕ್ಕಿಂತ ಹೆಚ್ಚು ಹೊರಗಡೆ ಸದ್ದು ಮಾಡಿದರು.
ದಾಂಪತ್ಯ ಜೀವನದಿಂದ ಹಿಡಿದು ಹಲವಾರು ಕಾರಣಗಳಿಂದ ಸುದ್ದಿ ಮಾಡಿದ ಈ ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಇದೀಗ
ಸರ್ಕಾರಕ್ಕೆ ಹಾಗೂ ಉದ್ಯೋಗಿಗಳಿಗೆ ವಂಚನೆ ಆರೋಪ ಎದುರಿಸುತ್ತಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ನಂತರ ರಾಬಿನ್ ಉತ್ತಪ್ಪ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯನ್ನು ನಡೆಸುತ್ತಿದ್ದಾರೆ.
ಈ ಕಂಪನಿಯಲ್ಲಿ ಸಾಕಷ್ಟು ಮಂದಿ ಉದ್ಯೋಗಿಗಳಿದ್ದಾರೆ. ಅವರಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿತ್ತು ಅಲ್ಲದೇ ಅವರ
ಸಂಬಳದಿಂದ ಪಿಎಫ್ ಹಣವನ್ನು ತಿಂಗಳು ತಿಂಗಳು ಕಡಿತ ಮಾಡಲಾಗುತ್ತಿತ್ತು. ಆದರೆ ಈ ಹಣವನ್ನು ಉದ್ಯೋಗಿಗಳ ಖಾತೆಗೆ ಹಾಕುತ್ತಿಲ್ಲ. ಹಣ ಪಾವತಿಸುವಂತೆ ಪಿ ಎಫ್ ಅಧಿಕಾರಿಗಳು ಸಂಸ್ಥೆಗೆ ಪತ್ರ ಬರೆದರೂ ಯಾವುದೇ ಉತ್ತರ ನೀಡಿಲ್ಲ.
ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ದಾಖಲೆ ಪತ್ರಗಳನ್ನು ಅವಲೋಕಿಸಿದ್ದಾರೆ ಈ ವೇಳೆ ರಾಬಿನ್ ಉತ್ತಪ್ಪ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ನೌಕರರ ಪಿಎಫ್ ವಂತಿಗೆ ಹಣವನ್ನು ಪಾವತಿಸದೆ ಸುಮಾರು 23 ಲಕ್ಷ ಹಣವನ್ನು ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿನಗರದ ಪೊಲೀಸರಿಗೆ ಪಿಎಫ್ಓ ಅಧಿಕಾರಿ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪತ್ರ ಬರೆದಿದ್ದಾರೆ. ಹೀಗಾಗಿ ಪೊಲೀಸರು ರಾಬಿನ್ ಉತ್ತಪ್ಪರ ವಿಳಾಸ ಹುಡುಕಿಕೊಂಡು ಹೋಗಿದ್ದರು. ಆದರೆ ಆ ವಿಳಾಸದಲ್ಲಿ ಉತ್ತಪ್ಪ ವಾಸವಿಲ್ಲದಿರುವುದು ಗೊತ್ತಾಗಿ ಪೊಲೀಸರು ವಾಪಸ್ ಆಗಿದ್ದು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ