ಬೆಂಗಳೂರು,ನ.25:
ವಿಧಾನಸಭೆ ಉಪಚುನಾವಣೆಯ ಸೋಲಿನಿಂದ ತತ್ತರಿಸಿರುವ ಬಿಜೆಪಿಯಲ್ಲಿ ಇದೀಗ ಭಿನ್ನಮತದ ಧಗೆ ತೀವ್ರಗೊಂಡಿದೆ.
ಪಕ್ಷದ ಅಧ್ಯಕ್ಷ ವಿಜಯೇಂದ್ರ ನಾಯಕತ್ವ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ತಂಡ ವಕ್ಫ್ ವಿರುದ್ಧ ಜನಾಂದೋಲನಕ್ಕೆ ಮುಂದಾಗಿದೆ.
ಬೀದರ್ ನಿಂದ ಆರಂಭವಾಗಿರುವ ನಾಯಕರ ಈ ಯಾತ್ರೆ ವಕ್ಫ್ ಆಸ್ತಿ ಒತ್ತುವರಿ ಮಾಡಲಾಗಿದೆ ಎಂದು ನೋಟಿಸ್ ಪಡೆದಿರುವ ರೈತರ ಜೊತೆ ಮಾತುಕತೆ ನಡೆಸಲಿದೆ.
ನಾಯಕರ ತಂಡ ಮೊದಲಿಗೆ ನರಸಿಂಹ ಝರಣಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಗೋಶಾಲೆಯಲ್ಲಿ ಗೋವಿಗೆ ಪೂಜೆ ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ವಕ್ಫ್ ವಿವಾದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಬೀದರ್ ಜಿಲ್ಲೆಯಿಂದ ಆರಂಭಿಸಿದ್ದೇವೆ. ಸಂಕಷ್ಟಕ್ಕೀಡಾದವರ ನೆರವಿಗೆ ದಾವಿಸುವುದೇ ಈ ಯಾತ್ರೆಯ ಉದ್ದೇಶ ಎಂದು ತಿಳಿಸಿದರು
ಹಿಂದೂ, ಮುಸ್ಲಿಂ ಎಲ್ಲರ ಆಸ್ತಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿದ್ದಾರೆ. ಈ ಬಗ್ಗೆ ಅಹವಾಲು ಆಲಿಸಲು ನಾವು ವಾರ್ ರೂಂ ಮಾಡಿದ ನಂತರ ಸಾಕಷ್ಟು ಕರೆಗಳು ಬರುತ್ತಿವೆ ಎಲ್ಲಾ ಕರೆಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸುತಿದ್ದೇವೆ ಎಂದು ಹೇಳಿದರು
ವಕ್ಫ್ ವಿವಾದ ಗಮನಕ್ಕೆ ಬರುತ್ತಿದ್ದಂತೆ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದಲ್ಲಿ ಹೋರಾಟ ನಡೆಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಕೇಂದ್ರ ಸಂಸದೀಯ ಸಮಿತಿ ಕೂಡ ಭೇಟಿ ನೀಡಿತ್ತು. ಮಾಹಿತಿ ಸಂಗ್ರಹಿಸಿ ಕಳಿಸಿಕೊಡುವಂತೆ ತಿಳಿಸಿತ್ತು. ಅವರ ಸೂಚನೆ ಮೇರೆಗೆ ಮಾಹಿತಿ ಸಂಗ್ರಹಿಸಿ, ಜನಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಬೀದರ್ ತಾಲ್ಲೂಕಿನ ಚಟನಳ್ಳಿ, ಧರ್ಮಾಪೂರ ಗ್ರಾಮದ ರೈತರ ಆಸ್ತಿಯಲ್ಲಿ ವಕ್ಫ್ ಎಂದು ನಮೂದಾಗಿದೆ. ಅಲ್ಲಿಗೆ ಕೂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತೇವೆ. ಇದು ಧರ್ಮದ ಕೆಲಸ ಎಂದು ಹೇಳಿದರು.
ಈ ತಂಡದಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಬಿ.ಪಿ. ಹರೀಶ್, ಮಾಜಿಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಹಾಜರಿದ್ದರು
Previous Article14 ವರ್ಷಗಳ ಬಳಿಕ ಮತ್ತೆ ಆರ್ಸಿಬಿ ಸೇರಿಕೊಂಡ ಭುವನೇಶ್ವರ್
Next Article ಮುಜುಗರಕ್ಕೀಡಾದ ಸಚಿವ ಕೆ.ಜೆ.ಜಾರ್ಜ್.