ಬೆಂಗಳೂರು,ಫೆ.7-
ಇಂಧನ ಹೊಂದಾಣಿಕೆ ವೆಚ್ಚ ಹೆಚ್ಚಳ, ಪೂರೈಕೆಯಲ್ಲಿ ನಷ್ಟ ಸೇರಿದಂತೆ ಹಲವು ವಲಯಗಳಲ್ಲಿ ವಿದ್ಯುತ್ ವಿತರಣಾ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು, ಇದನ್ನು ಭರಿಸುವ ದೃಷ್ಟಿಯಿಂದ ವಿದ್ಯುತ್ ದರ ಹೆಚ್ಚಳಕ್ಕೆ ಅವಕಾಶ ನೀಡುವಂತೆ KERC (Karnataka Electricity Regulatory Commission) ಗೆ ಮನವಿ ಸಲ್ಲಿಸಿವೆ.
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ವಿದ್ಯುತ್ ದರ ಏರಿಕೆಯ ಪ್ರಸ್ತಾಪವನ್ನು ಸಲ್ಲಿಸಿದ್ದು, ಚುನಾವಣೆಗೂ ಮೊದಲೇ ವಿದ್ಯುತ್ ದರ ಏರಿಕೆಯಾಗುತ್ತದೋ, ಇಲ್ಲವೆ ಚುನಾವಣೆಯ ನಂತರ ದರ ಏರಿಕೆಯ ತೀರ್ಮಾನಗಳು ಆಗುತ್ತವೆಯೋ ಎಂಬುದು ಕುತೂಹಲ ಮೂಡಿಸಿದೆ. ರಾಜ್ಯದ ನಾಲ್ಕು ಎಸ್ಕಾಂ (ESCOM) ಗಳು ಪ್ರತಿ ಯುನಿಟ್‌ಗೆ 1.50 ಪೈಸೆಯಿಂದ 2 ರೂ. ವರೆಗೆ ದರ ಏರಿಕೆಯ ಕೋರಿಕೆ ಸಲ್ಲಿಸಿವೆ. ಎಸ್ಕಾಂಗಳ ದರ ಏರಿಕೆ ಬಗ್ಗೆ KERC ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಲು ಫೆ. 13 ರಿಂದ ಮಾ.1ರ ತನಕ ಸಾರ್ವಜನಿಕ ಅದಾಲತ್ ನಡೆಸಲಿದೆ.
ಎಸ್ಕಾಂಗಳು ಪ್ರತಿವರ್ಷವೂ ವಿದ್ಯುತ್ ದರ ಏರಿಕೆಗೆ KERC ಮುಂದೆ ಪ್ರಸ್ತಾವನೆ ಸಲ್ಲಿಸುವುದು ಸಾಮಾನ್ಯ. ಅದರಂತೆ ಈ ಬಾರಿ 1.50 ಪೈಸೆಯಿಂದ 2 ರೂ.ವರೆಗೆ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ KERC ಸಾರ್ವಜನಿಕ ಅದಾಲತ್ ನಂತರ ತೀರ್ಮಾನ ಪ್ರಕಟಿಸಲಿದೆ. KERC ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ದರ ಏರಿಕೆಯ ತೀರ್ಮಾನ ಮಾಡಬೇಕು. ಒಂದು ವೇಳೆ ನೀತಿ ಸಂಹಿತೆ ಜಾರಿಯಾದರೆ ದರ ಪರಿಷ್ಕರಣೆ ಪ್ರಕಟಿಸಲು ಸಾಧ್ಯವಿಲ್ಲ. ಹಾಗಾಗಿ, ಚುನಾವಣೆಗೂ ಮೊದಲೇ ವಿದ್ಯುತ್ ದರ ಪರಿಷ್ಕರಣೆಯಾಗುತ್ತದೋ ಇಲ್ಲ ಚುನಾವಣೆ ನಂತರ ವಿದ್ಯುತ್ ದರ ಪರಿಷ್ಕರಣೆ ತೀರ್ಮಾನ ಆಗುತ್ತದೋ ಎಂಬುದು ಸದ್ಯಕ್ಕಿರುವ ಕುತೂಹಲ.