ಬೆಂಗಳೂರು,ಮಾ.17-ಮನೆಗೆ ಶಾಂತಿ ಪೂಜೆಗೆ ಬಂದ ವ್ಯಕ್ತಿಯೊಬ್ಬ ತಾನು ಚಿನ್ನದ ವ್ಯವಹಾರ ಮಾಡುವುದಾಗಿ ನಂಬಿಸಿ ಮನೆಯ ಯಜಮಾನಿಯಿಂದ 1 ಕೋಟಿ ರೂಗೂ ಅಧಿಕ ಹಣ ಪಡೆದು ವಂಚಿಸಿರುವ ಘಟನೆ ಕೆಆರ್ ಪುರಂನಲ್ಲಿ ನಡೆದಿದೆ.
ಅಮರಾವತಿ ಎಂಬ ಗೃಹಿಣಿಗೆ ಚಿನ್ನದ ಬಿಸ್ಕೆಟ್‌ಗಳನ್ನು ತೋರಿಸಿ 1 ಕೋಟಿ ರೂಗೂ ಅಧಿಕ ಹಣ ಪಡೆದು ವಂಚಿಸಿದ ಆರೋಪದಡಿ ಗೋಪಾಲಕೃಷ್ಣ, ರಾಕೇಶ್ ರೆಡ್ಡಿ, ರೂಪಾ ಹಾಗೂ ಯಶವಂತ್ ಕುಮಾರ್ ಎಂಬವರ ವಿರುದ್ಧ ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆ.ಆರ್.ಪುರಂನ ಕಿತ್ತಗನೂರು ಮುಖ್ಯರಸ್ತೆಯ ಸಾಯಿ ಲೇಔಟ್‌ನ ನಿವಾಸಿ ಅಮರಾವತಿ ಹಣ ಕಳೆದುಕೊಂಡಿದ್ದಾರೆ.
ಕಳೆದ ವರ್ಷ ಅಮರಾವತಿ ತಮ್ಮ ಮನೆಯಲ್ಲಿ ಶಾಂತಿ ಪೂಜೆಗಾಗಿ ಗೋಪಾಲಕೃಷ್ಣನನ್ನು ಕರೆಸಿದ್ದರು. ಪೂಜೆ ಮುಗಿದ ಎರಡು ದಿನಗಳ ಬಳಿಕ ರಾಕೇಶ್ ರೆಡ್ಡಿಯೊಂದಿಗೆ ಅಮರಾವತಿಯವರ ಮನೆಗೆ ಬಂದಿದ್ದ ಗೋಪಾಲಕೃಷ್ಣ, ”ನಮ್ಮ ಬಳಿ 300 ಕೋಟಿ ಅಮೆರಿಕನ್ ಡಾಲರ್ ಇದೆ. ಅದರಿಂದ ನಮಗೆ ಕೆ.ಜಿ ತೂಕದಲ್ಲಿ ಚಿನ್ನ ದೊರೆಯುತ್ತದೆ. ಪ್ರತಿ ಗ್ರಾಂ ಚಿನ್ನವನ್ನು 4 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತೇವೆ” ಎಂದು ನಂಬಿಸಿದ್ದರು.
ಅಮರಾವತಿ ಮತ್ತವರ ಮಗನ ಸಮ್ಮುಖದಲ್ಲಿಯೇ ಗೋಲ್ಡ್ ಬಿಸ್ಕೆಟ್ ಅನ್ನು ಜ್ಯುವೆಲರಿ ಅಂಗಡಿಗೆ ಮಾರಾಟ ಮಾಡಿ ಹಣ ಪಡೆಯುವ ಮೂಲಕ ನಂಬಿಕೆ ಗಳಿಸಿದ್ದರು. ಬಳಿಕ ಚಿನ್ನ ನೀಡುವುದಾಗಿ ಅಮರಾವತಿ ಮತ್ತು ಅವರ ಪರಿಚಿತರ ಕಡೆಯಿಂದ 1 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದುಕೊಂಡಿದ್ದರು. ಹಣ ಪಡೆದ ಬಳಿಕವೂ ಚಿನ್ನ ನೀಡದಿದ್ದಾಗ ಪ್ರಶ್ನಿಸಿದ್ದು, ”ನಮ್ಮ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಬಳಿ ಸಿಲುಕಿ ಹಾಕಿಕೊಂಡಿದೆ” ಎಂದು ಸಬೂಬು ಹೇಳಿದ್ದರು.
ಸಾಕಷ್ಟು ದಿನ ಕಳೆದರೂ ಚಿನ್ನವನ್ನೂ ನೀಡದೆ, ಹಣವನ್ನೂ ಕೊಡದೆ ವಂಚಿಸಿರುವ ಆರೋಪಿಗಳ ವಿರುದ್ಧ ಸದ್ಯ ಅಮರಾವತಿಯವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.