ಕರ್ನಾಟಕ : ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದ ತನಿಖೆ ಸರಿಯಾದ ರೀತಿಯಲ್ಲಿ ನಡೆದರೆ ಮುಖ್ಯಮಂತ್ರಿ ತಲೆದಂಡವಾಗಲಿದ್ದು ರಾಜ್ಯಕ್ಕೆ ಹೊಸ ಸಿಎಮ್ ಬರಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದ ಚಾರ್ಜ್ ಶೀಟ್ ಆದ ಮೇಲೆ ಸೂಕ್ತ ರೀತಿಯ ತನಿಖೆ ನಡೆಯುತ್ತಿಲ್ಲ. ಈ ಬಗ್ಗೆ ಪಾರದರ್ಶಕ ತನಿಖೆ ನಡೆದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ 3 ನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದರು.
ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣದ ತನಿಖೆ ಕಲಬುರ್ಗಿಗೆ ಮಾತ್ರ ಸೀಮಿತವಾಗಬಾರದು. ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು. ಅಭ್ಯರ್ಥಿಗಳು ಹಾಗು ಹಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ತನಿಖೆ ಮಾತ್ರ ನಡೆಯುತ್ತಿಲ್ಲ ಎಂದು ಕಿಡಿಕಾರಿದರು.
ಮರು ಪರೀಕ್ಷೆ ಮಾಡಬೇಕೆಂದಿರುವ ಸರ್ಕಾರ 545 ಮಂದಿ ವೈ.ಎಂ.ಆರ್ ಶೀಟ್ ತರಿಸಿಕೊಂಡಿದ್ದಾದರೂ ಯಾಕೆ.? ಇಲ್ಲಿ ಸರ್ಕಾರದ ದಡ್ಡತನ ಎದ್ದು ಕಾಣುತ್ತಿದೆ. 300 ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ. ಆದರೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಜನರನ್ನ ಅರೆಸ್ಟ್ ಮಾಡಿದ್ದಾರೆ.? ಒಂದೆರಡು ಕಿಂಗ್ ಪಿನ್ ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು