ಚಿಕ್ಕಮಗಳೂರು,ಮೇ.8-ಬರುವ ಡಿಸೆಂಬರ್ಗೆ 100 ರೂ ಮುಖಬೆಲೆಯ ನೋಟ್ಗಳನ್ನು ನಿಷೇಧಿಸಲಿದ್ದು, ನಮ್ಮ ಮಠಕ್ಕೆ ರಾಜಕಾರಣಿಗಳಿಂದ 350 ಕೋಟಿ ರೂ ಮೊತ್ತದ 100ರೂಗಳಿರುವ ಫಂಡ್ ಬಂದಿದ್ದು, ಮೂರು ಲಕ್ಷ ಕೊಟ್ಟರೆ ಹತ್ತು ಲಕ್ಷ ಕೊಡಲಾಗುವುದು.. ತಿಂಗಳಿಗೊಮ್ಮೆ 50 ಸಾವಿರ ನೀಡಿದರೆ ಸಾಕು ಎಂದು ನಂಬಿಸಿ ನಕಲಿ ಸ್ವಾಮೀಜಿಗಳು ಪ್ರಸಿದ್ಧ ಮಠವೊಂದರ ಹೆಸರು ಹೇಳಿಕೊಂಡು ವಂಚಿಸಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಬೆಳಕಿಗೆ ಬಂದಿದೆ.
ನಕಲಿ ಸ್ವಾಮೀಜಿಗಳಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದ ಕೆಇಬಿ ಕಂಟ್ರಾಕ್ಟರ್ ವಿಜಯ್ ಮೋಸ ಹೋಗಿದ್ದು ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ನಮ್ಮದು ಪ್ರತಿಷ್ಠಿತ ಮಠವಾಗಿದ್ದು, ಮಠಕ್ಕೆ ರಾಜಕಾರಣಿಗಳು 350 ಕೋಟಿ ರೂ. ಹಣ ನೀಡಿದ್ದಾರೆ. ಅದರಲ್ಲಿ ನೂರು ರೂಪಾಯಿಯೇ ಹೆಚ್ಚಿವೆ. ಡಿಸೆಂಬರ್ ವೇಳೆಗೆ 100 ಮುಖಬೆಲೆಯ ನೋಟು ಬ್ಯಾನ್ ಆಗುತ್ತದೆ. ಹಾಗಾಗಿ, ಈ ಹಣವನ್ನು ಸಾಲ ರೀತಿ ಕೊಡಲು ಮುಂದಾಗಿದ್ದೇವೆ ಎಂದು ಕಥೆ ಹೇಳಿದ್ದಾರೆ. ಅವರ ಮಾತನ್ನು ನಂಬಿದ ವಿಜಯ್‍ಗೆ 10 ಲಕ್ಷ ಕೊಡ್ತೇವೆ ಎಂದ ಸ್ವಾಮೀಜಿಗಳು, 500 ಮುಖ ಬೆಲೆಯ 3 ಲಕ್ಷ ಕೊಡು, ನಾವು 100 ಮುಖ ಬೆಲೆಯ 10 ಲಕ್ಷ ಕೊಡ್ತೇವೆ, ಉಳಿದ 7 ಲಕ್ಷ ಹಣವನ್ನ 6 ತಿಂಗಳಿಗೊಮ್ಮೆ 50 ಸಾವಿರದಂತೆ ಸಾಲ ಕಟ್ಟಿಕೊಂಡು ಹೋಗುವ ಅವಕಾಶ ನೀಡಿದ್ದಾರೆ.
ಅವಕಾಶ ಕೇಳಿದ ವಿಜಯ್, ಬಾಳೆಹೊನ್ನೂರಿಗೆ ಬಂದು ಕಳ್ಳ ಖಾವಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ 500 ಮುಖಬೆಲೆಯ ಅಸಲಿ 3 ಲಕ್ಷ ಹಣ ಕೊಟ್ಟಿದ್ದಾರೆ. ಬಳಿಕ ನಕಲಿ ಸ್ವಾಮೀಜಿಗಳು ತಂದಿದ್ದ ಪೆಟ್ಟಿಗೆಯನ್ನು ಪಡೆದುಕೊಂಡು, 10 ಲಕ್ಷ ರೂಪಾಯಿ ಇದೆ ಎಂದು ನಂಬಿದ್ದಾರೆ. ಅವರು ಹೋದ ಬಳಿಕ ಯಾಕೋ ಅನುಮಾನ ಬಂದು ಪೆಟ್ಟಿಗೆಯನ್ನು ಪರಿಶೀಲಿಸಿದಾಗ 1800 ರೂಪಾಯಿ ಮಾತ್ರ ಇರುವುದು ಕಂಡುಬಂದಿದೆ. ಪೆಟ್ಟಿಗೆಯ ಒಳಗೆ ಕಾಗದ, ನ್ಯೂಸ್ ಪೇಪರ್ ತುಂಬಿ ಕಿರಾತಕರು ಪರಾರಿ ಆಗಿದ್ದಾರೆ.
ಕಳ್ಳ ಸ್ವಾಮೀಜಿಗಳಿಗಾಗಿ ವಿಜಯ್ ಕುಮಾರ್ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಕಿಡಿಗೇಡಿಗಳು ಪತ್ತೆಯಾಗದ ಬಳಿಕ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಆಗಮಿಸಿ ನಡೆದ ಕಥೆಯನ್ನೆಲ್ಲಾ ಹೇಳಿ ಮೂವರು ವಂಚಕರ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಾಳೆಹೊನ್ನೂರು ಪೊಲೀಸರು, ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.
Previous Articleಯುದ್ಧ ಮಾಡಲು ರಷ್ಯಾಕ್ಕೆ ಪ್ರತಿದಿನ 7000 ಕೋಟಿ ರೂಪಾಯಿ ಬೇಕು
Next Article ಪಂಚಾಯತಿ ಅಧ್ಯಕ್ಷನ ಸೆರೆ