ಹುಬ್ಬಳ್ಳಿ : ಏ.25-ಹಳೆ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಎಐಎಂಐಎಂ ಪಕ್ಷದ ನಗರ ಘಟಕದ ಅಧ್ಯಕ್ಷ ದಾದಾಪೀರ್ ಬೆಟಗೇರಿ ಜೊತೆಗೆ ಸಿಕ್ಕಿಬಿದ್ದಿರುವ ಎಂಟು ಆರೋಪಿಗಳನ್ನು ನಗರ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ದಾದಾಪೀರ್ ಬೆಟಗೇರಿ ಜೊತೆಗೆ ಮಹಮ್ಮದ್ ರಫಿಕ್ ಪಿಂಜಾರ, ಇಮ್ರಾನ್‌ಖಾನ್ ಸೌದಾಗರ್, ಅಕ್ಬರ್‌ಲಿ ಯಾದವಾಡ, ಸಮೀರ ಹರಿಹರ, ಸಾದಿಕ್ ಖಾನ್ ಪಠಾಣ್, ಸೈಫ್‌ಖಾನ್ ಜಾಗೀರ್‌ದಾರ್, ಸಾದಿಕ್ ಮಕಾಂದಾರ್ ನನ್ನು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಇಲ್ಲಿಯವರೆಗೆ ಗಲಭೆಗೆ ಕಾರಣರಾದ ಎಐಎಂಐಎಂನ ಮೂವರು ಪ್ರಮುಖರು ಸೇರಿ 146 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ತಿಳಿಸಿದ್ದಾರೆ.
ಡಿಜಿಟಲ್ ಸಾಕ್ಷ್ಯ:
ಇನ್ನೊಂದೆಡೆ ಇಡೀ ಗಲಭೆಯ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿರುವ ವಸೀಂ ಪಠಾಣ್ ಟ್ಯಾಬ್ ವಶಪಡಿಸಿಕೊಂಡಿರುವ ಪೊಲೀಸರು ಡಿಜಿಟಲ್ ಸಾಕ್ಷ್ಯ ಕಲೆಹಾಕುವ ಕೆಲಸ ಆರಂಭಿಸಿದ್ದಾರೆ. ಗಲಭೆ ಬಳಿಕ ವಸೀಂ ಪಠಾಣ್ ತನ್ನ ಮೊಬೈಲ್ ಹಾಗು ಸಿಮ್ ಅನ್ನು ಬದಲಿಸಿದ್ದಾನೆ. ವಶಪಡಿಸಿಕೊಂಡ ಟ್ಯಾಬ್‌ನಲ್ಲಿ ಕೆಲ ಸಂಘಟನೆಗಳ ಜತೆ ನಡೆಸಿರುವ ಇ-ಮೇಲ್ ಕೂಡ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಇನ್ನು ಗಲಭೆ ವೇಳೆ ಕೆಲಹೊತ್ತು ಸಂಘಟನೆಯೊಂದರ ನೀಲಿ ಧ್ವಜ ಕೂಡ ಹಾರಾಡಿದೆ. ಈ ಕುರಿತು ವಿಡಿಯೋ ಸಹ ಹರಿದಾಡುತ್ತಿದ್ದು, ಇದಕ್ಕೆ ಸಂಬಂಧಿಸಿ ಕೆಲವರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
12 ಸಾವಿರಕ್ಕೂ ಹೆಚ್ಚು ಕಾಲ್:
ಗಲಭೆ ನಡೆದ ಏ.16ರಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಸುತ್ತಲಿನ ನಾಲ್ಕೈದು ಟವರ್‌ಗಳಿಂದ ರಾತ್ರಿ 8ರಿಂದ 12 ರವರೆಗೆ 12 ಸಾವಿರಕ್ಕೂ ಹೆಚ್ಚು ಮೊಬೈಲ್ ಕರೆಗಳು ಹೋಗಿವೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ರಾತ್ರಿ ವಿನಿಮಯವಾಗಿರುವ ಕರೆಗಳ ಮಾಹಿತಿ ಸಂಗ್ರಹಕ್ಕಾಗಿಯೇ ಪ್ರತ್ಯೇಕ ತಂಡ ರಚಿಸಲಾಗಿದೆ. ಪ್ರತಿನಿತ್ಯ ಅಲ್ಲಿರುವ ಮೊಬೈಲ್ ಟವರ್ ಮೂಲಕ ಗರಿಷ್ಠ 80 ಸಾವಿರ ಕರೆಗಳು ವಿನಿಮಯವಾಗುತ್ತಿದ್ದವು. ಆದರೆ, ಗಲಭೆ ನಡೆದ ದಿನ 90 ಸಾವಿರಕ್ಕೂ ಹೆಚ್ಚು ಕರೆಗಳು ಹೋಗಿವೆ.
ಮುಲಾಜಿಲ್ಲದೆ ಕ್ರಮ:
ಹಳೇ ಹುಬ್ಬಳ್ಳಿ ಗಲಭೆ ಪ್ರಕಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರು ಗಲಭೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಅಲ್ಲದೆ, ನಗರದ ಇತರೆಡೆ ಕೂಡ ಕ್ರಿಮಿನಲ್ ಪ್ರಕರಣದಲ್ಲಿ ಪಾಲ್ಗೊಂಡರೂ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ವಹಿಸಲಾಗುವುದು. ಬಂಧಿತರಲ್ಲಿ ಇಬ್ಬರು ರೌಡಿ ಶೀಟರ್‌ಗಳಿದ್ದಾರೆ.
ಹೊಸದಾಗಿ ರೌಡಿ ಶೀಟರ್ ತೆರೆಯುವ ಕುರಿತು ಕ್ರಮ ಕೈಗೊಳ್ಳಲಾಗುವುದು. ವಿಡಿಯೋ, ಸಿಸಿಟಿವಿ ಫುಟೇಜ್ ಸೇರಿ ಇತರ ಸಾಕ್ಷ್ಯ ಆಧರಿಸಿ ಬಂಧನ ಮುಂದುವರಿದಿದೆ ಎಂದು ಕಮಿಷನರ್ ಲಾಬೂರಾಮ್ ತಿಳಿಸಿದ್ದಾರೆ.