ಬೆಂಗಳೂರು : ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪ ಸಂಬಂಧ ಮತ್ತೊಬ್ಬ ಕಾನ್ಸ್ಟೇಬಲ್ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಪಿಎಸ್ ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ನಗರದ 7 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಯಶವಂತ್ ದೀಪ್ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಹಲವು ವರ್ಷಗಳಿಂದ ಮಾಜಿ ಪ್ರಧಾನಿಗಳ ಭದ್ರತೆಗೆ ಯಶವಂತ್ ನಿಯೋಜನೆಗೊಂಡಿದ್ದ. ಸೇವಾನಿರತ ಕೋಟಾದಡಿ 3ನೇ ರ್‍ಯಾಂಕ್ ಪಡೆದಿದ್ದ.
ಅಕ್ರಮ ಎಸಗಿ ಪಿಎಸ್ಐ ಹುದ್ದೆಗೆ ಅಯ್ಕೆಯಾದ ಮಾಹಿತಿ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ತರಬೇತಿಗಳ ವಿಚಾರಣೆ:
ಈ ನಡುವೆ ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಟ್ರೈನಿ ಪಿಎಸ್‌ಐ ಯಶವಂತಗೌಡ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಬೆನ್ನಲ್ಲೇ ಪಿಟಿಸಿಯಲ್ಲಿರುವ ಇನ್ನೂ ನಾಲ್ವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.