ಚೆನ್ನೈ
ತಮಿಳುನಾಡಿನಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಸಾಕಷ್ಟು ಕಸರತ್ತು ಮಾಡುತ್ತಿರುವ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇದೀಗ ರಾಜ್ಯದಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ
ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ತಮ್ಮ ನಿವಾಸದ ಮುಂದೆ ಆರು ಬಾರಿ ಛಡಿಯಿಂದ ಹೊಡೆದುಕೊಂಡ ಅವರು ಇಂದಿನಿಂದ 48 ದಿನಗಳ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರಕಟಿಸಿದರು.
ಈ ಅವಧಿಯಲ್ಲಿ ರಾಜ್ಯದ ಆರು ಮುರುಗನ್ ದೇವಾಲಯಗಳಿಗೆ ಭೇಟಿ ನೀಡಿ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಕಿತ್ತೊಗೆಯುವ ಹೋರಾಟಕ್ಕೆ ಶಕ್ತಿ ನೀಡುವಂತೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ನಾನು ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಅಣ್ಣಾಮಲೈ ಅವರು ಪ್ರತಿಜ್ಞೆ ಮಾಡಿದ್ದು, ಇದನ್ನು ಪಕ್ಷದ ಇತರ ಕಾರ್ಯಕರ್ತರು ಅನುಸರಿಸಬೇಕು ಎಂದು ನಾನು ಒತ್ತಾಯಿಸುವುದಿಲ್ಲ ಎಂದು ಹೇಳಿದರು.
15 ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಇಷ್ಟು ದಿನ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿದ್ದಕ್ಕೆ ಇಂದು ಅಮಾಯಕ ವಿದ್ಯಾರ್ಥಿನಿ ಮೇಲೆ ಈ ಕ್ರೌರ್ಯ ನಡೆದಿದೆ. ಇದಕ್ಕೆ ಡಿಎಂಕೆ ಸರಕಾರವೇ ಸಂಪೂರ್ಣ ಹೊಣೆ. ಇದನ್ನು ತಮಿಳುನಾಡಿನ ಜನರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? ಆಡಳಿತ ಪಕ್ಷದವರಾಗಿದ್ದರೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ಕಾನೂನು ತಮಿಳುನಾಡಿನಲ್ಲಿ ಇದೆಯೇ? ಎಂದು ಕಿಡಿ ಕಾರಿದರು
Previous Articleಯಾರು ಅತಿ ಹೆಚ್ಚು ಮಾಂಸ ತಿನ್ನುವುದು ಗೊತ್ತಾ.
Next Article ಗಾಂಜಾ ಬೆನ್ನು ಹತ್ತಿದ ಪೊಲೀಸ್.