ಈ ವಾರ ಅಮೆರಿಕಾದ ಅಧಿಕಾರ ಕೇಂದ್ರ ಕ್ಯಾಪಿಟಲ್ ಕಟ್ಟಡದ ಮೇಲೆ ನಿಗೂಢ ಬೆಳಕಿನ ಆಕೃತಿಗಳು ಕಾಣಿಸಿದ್ದು ಅದನ್ನು ಗುರುತಿಸಲಾಗದ ಹಾರುವ ವಸ್ತುಗಳು (UFOs) ಎಂದು ವಿವರಿಸಲಾಗಿದೆ. ಇದು ಜನರಲ್ಲಿ ಊಹಾಪೋಹ ಮತ್ತು ಭಯವನ್ನು ಹುಟ್ಟುಹಾಕಿದೆ. ಕೆಲವರು ಅವುಗಳನ್ನು ಬರಿ ಹೊಳೆಯುವ ದೀಪಗಳು ಎಂದು ಕರೆಯುವ ಮೂಲಕ ವಿಷಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. .
ಯುಎಸ್ ಏರ್ ಫೋರ್ಸ್ನ ನ ಅನುಭವಿ ಮತ್ತು ಪರವಾನಗಿ ಪಡೆದ ಪ್ರವಾಸ ಮಾರ್ಗದರ್ಶಿ ಡೆನ್ನಿಸ್ ಡಿಗ್ಗಿನ್ಸ್ ತೆಗೆದ ವೈರಲ್ ಛಾಯಾಚಿತ್ರದಲ್ಲಿ, ಕ್ಯಾಪಿಟಲ್ ಗುಮ್ಮಟದ ಮೇಲಿರುವ ಸ್ವಾತಂತ್ರ್ಯದ ಪ್ರತಿಮೆಯ ಮೇಲೆ ನಾಲ್ಕು ಪ್ರಕಾಶಮಾನವಾದ ದೀಪಗಳು ತೂಗಾಡುತ್ತಿರುವುದನ್ನು ಕಾಣಬಹುದು. ವಿಭಿನ್ನ ಕೋನದಿಂದ ತೆಗೆದ ಪ್ರತ್ಯೇಕ ವೀಡಿಯೊವು ನೆಟಿಜನ್‌ಗಳಲ್ಲಿ ಭಯವನ್ನು ಹುಟ್ಟುಹಾಕಿದೆ, ಈ ಪ್ರಕಾಶಮಾನವಾದ ದೀಪಗಳು ಎಲ್ಲಿಂದ ಹೇಗೆ ಬಂದವು ಎಂದು ಪ್ರಶ್ನಿಸಲು ಆರಂಭವಾಗಿದೆ.
“ಅನ್ಯಲೋಕದ” ಬಾಹ್ಯಾಕಾಶ ನೌಕೆಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಅಮೆರಿಕಾದ ಸಂಸತ್ತು ನಡೆಸಿದ ಕೆಲವೇ ವಾರಗಳಲ್ಲಿ ಈ ಘಟನೆ ಸಂಭವಿಸಿರುವುದು ಜನರಲ್ಲಿ ಭಯವನ್ನು ಹೆಚ್ಚಿಸಿದೆ.