ಮುಂಬಯಿ: ಟಾಟಾ ಐಪಿಎಲ್‌ನ ತನ್ನ ಕೊನೆಯ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ಕಹಿಯುಂಡು, ಅಭಿಯಾನವನ್ನು ಮುಗಿಸಿದೆ. ಬ್ರಬೌರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ 68ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ದುಕೊಂಡಿತು. ರಾಜಸ್ಥಾನ ರಾಯಲ್ಸ್ ದಾಳಿಯನ್ನು ಪುಡಿಗಟ್ಟಿದ ಮೊಯೀನ್ ಆಲಿ ಏಕಾಂಗಿಯಾಗಿ ಆಡಿ, ತಂಡದ ಮೊತ್ತವು 150ರ ಗಡಿ ಮುಟ್ಟುವಂತೆ ಮಾಡಿದರು. ಮೊಯೀನ್ ಕೇವಲ 57 ಎಸೆತಗಳಲ್ಲಿ 93 ರನ್ ಬಾಚಿದರು. ಇದರಲ್ಲಿ 13 ಬೌಂಡರಿ, 3 ಸಿಕ್ಸರ್ ಬಾರಿಸಿದ್ದರು. ಇವರಿಗೆ ನಾಯಕ ಧೋನಿ (26) ಮಾತ್ರ ಕೊಂಚ ಆಸರೆಯಾದರು. ಇವರನ್ನು ಬಿಟ್ಟರೆ ಡೆವೋನ್ ಕಾನ್ವೇ (16) ಮಾತ್ರ ಎರಡಂಕೆ ಸ್ಕೋರ್ ಗಳಿಸಲು ಸಾಧ್ಯವಾಯಿತು. ರಾಜಸ್ಥಾನ ಪರ ಚಹಲ್ ಹಾಗೂ ಮೆಕೋಯ್ ತಲಾ 2, ಅಶ್ವಿನ್ ಮತ್ತು ಬೋಲ್ಟ್ ತಲಾ 1 ವಿಕೆಟ್ ಗಳಿಸಿದರು.
ರಾಜಸ್ಥಾನದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅರ್ಧ ಶತಕ ಗಳಿಸಿ ಮಿಂಚಿದರು. 44 ಎಸೆತಗಳಲ್ಲಿ ಎಂಟು ಬೌಂಡರಿ, 1 ಸಿಕ್ಸರ್ ಸಹಿತ ಅವರು 59 ರನ್ ಗಳಿಸಿದರು. ಈ ಮಧ್ಯೆ ವಿಕೆಟ್‌ಗಳು ಉರುಳುತ್ತಿದ್ದರೂ ಸಮಚಿತ್ತದಿಂದ ಆಡಿದ ರವಿಚಂದ್ರನ್ ಅಶ್ವಿನ್ 23 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿಗಳಿದ್ದ ಆಜೇಯ 40 ರನ್ ಸಿಡಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ರಾಜಸ್ಥಾನ್ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ, ತಂಡಕ್ಕೆ 5 ವಿಕೆಟ್‌ಗಳ ಗೆಲುವು ಕೊಡಿಸಿದರು. ಚೆನ್ನೈ ಪರ ಪ್ರಶಾಂತ್ ಸೋಳಂಕಿ 2 ವಿಕೆಟ್ ಗಳಿಸಿದರು.
ಶನಿವಾರ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಡೆಲ್ಲಿ ಗೆದ್ದುಕೊಂಡರೆ ಸುಲಭವಾಗಿ ಪ್ಲೇಆಫ್ ಹಂತಕ್ಕೆ ಲಗ್ಗೆಯಿಡಲಿದೆ.