ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಕಳೆದ ಮಾರ್ಚ್‌ನಲ್ಲಿ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹಾಗು ರಾಡ್ ಮಾರ್ಷ್ ನಿಧನದ ನಂತರ ಆಸೀಸ್ ಕ್ರಿಕೆಟ್‌ಗಿದು ಮತ್ತೊಂದು ಬೇಸರದ ಸುದ್ದಿಯಾಗಿದೆ.
ಆ್ಯಂಡ್ರೋ ಸೈಮಂಡ್ಸ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಠಿಸಿದ್ದರು.46 ವರ್ಷದ ಕ್ರಿಕೆಟಿಗ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಅತ್ಯಂತ ಕೌಶಲ ಹೊಂದಿದ ಆಲ್‌ರೌಂಡರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 2003 ರಿಂದ 2007ರವರೆಗೆ ಆಸ್ಟ್ರೇಲಿಯಾ ಗೆದ್ದಿರುವ ಸತತ ಎರಡು ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. 1999 ಮತ್ತು 2007ರ ನಡುವೆ ವಿಶ್ವದಲ್ಲೇ ಹೆಚ್ಚು ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡಗಳ ಅವಿಭಾಜ್ಯ ಅಂಗವಾಗಿದ್ದರು.
ಮೂಲಗಳ ಪ್ರಕಾರ, ದುರಂತದ ವೇಳೆ ಸೈಮಂಡ್ಸ್ ಒಬ್ಬರೇ ಕಾರಿನಲ್ಲಿದ್ದರು. ದುರ್ಘಟನೆ ನಡೆದ ತಕ್ಷಣ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ ಅವರು ಗಂಭೀರವಾಗಿ ಗಾಯಗೊಂಡ ಪರಿಣಾಮ ಕೊನೆಯುಸಿರೆಳೆದರು ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಸೈಮಂಡ್ಸ್ ನಿಧನಕ್ಕೆ ಭಾರತೀಯರು ಸೇರಿದಂತೆ ವಿಶ್ವದ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ 46ನೇ ವಯಸ್ಸಿನಲ್ಲಿ ದುರಂತವಾಗಿ ನಿಧನರಾದ ಪ್ರೀತಿಯ ಕ್ವೀನ್ಸ್‌ಲ್ಯಾಂಡರ್‌ನ ನಷ್ಟದಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ. ‘ಇದು ಅಂತ್ಯಂತ ದಿಗಿಲು ಹುಟ್ಟಿಸುವ ಸುದ್ದಿ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಜೇಸನ್ ಗಿಲ್ಲೆಸ್ಪಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ಸುದ್ದಿ ನಿಜವಾಗಿಯೂ ಅತೀವ ಬೇಸರ ಹುಟ್ಟಿಸುತ್ತದೆ’ ಎಂದು ಆಸೀಸ್ ಹಿರಿಯ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್ ತಿಳಿಸಿದ್ದಾರೆ.
ವಿವಾದ: ಆಂಡ್ರ್ಯೂ ಸೈಮಂಡ್ಸ್ ಕ್ರಿಕೆಟ್‌ನಲ್ಲಿ ಪ್ರಖ್ಯಾತಿ ಗಳಿಸಿದಷ್ಟೇ ವಿವಾದಗಳಿಂದಲೂ ಗಮನ ಸೆಳೆದಿದ್ದರು. ಅದಕ್ಕೊಂದು ಉದಾಹರಣೆ ಮಂಕಿಗೇಟ್ ಹಗರಣ. 2008ರ ಹೊಸ ವರ್ಷದ ಹೊಸ್ತಿಲಲ್ಲಿ ಸಿಡ್ನಿಯಲ್ಲಿ ಭಾರತ ಮತ್ತು ಆಸೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ಹರ್ಭಜನ್ ಸಿಂಗ್ ಅವರನ್ನು ಮಂಕಿ (ಮಂಗ) ಎಂದು ಕರೆದಿದ್ದರು.