ಬೆಂಗಳೂರು, ಸೆ.16:
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದಿಂದ ವಜಾ ಗೊಳಿಸಿದ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ಆರಂಭಿಸಿದ್ದಾರೆ.
ಕೆ ಎನ್ ರಾಜಣ್ಣ ಅವರನ್ನು ಮಂತ್ರಿಮಂಡಲಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಭಾವಿಯಾಗಿರುವ ವಾಲ್ಮೀಕಿ ಸಮುದಾಯದ ಶಾಸಕರು ಮತ್ತು ರಾಜಣ್ಣ ಅವರ ಆಪ್ತರ ಭಿಗಿಪಟ್ಟಿಗೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜಣ್ಣ ಅವರ ಇತರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಅವರ ಆತ್ಮ ವಲಯಗಳು ಹೇಳಿವೆ.
ಮತಗಳ್ಳತನ ಕುರಿತಂತೆ ಹೇಳಿಕೆ ನೀಡಿದ ಆರೋಪದಲ್ಲಿ ರಾಜಣ್ಣ ಅವರಿಂದ ಯಾವುದೇ ಹೇಳಿಕೆ ಪಡೆಯದೆ ಏಕಾಏಕಿ ಅವರನ್ನು ಹೈಕಮಾಂಡ್ ಆದೇಶದ ಹೆಸರಿನಲ್ಲಿ ಸಂಪುಟದಿಂದ ವಜಾ ಮಾಡಿದ ಕ್ರಮ ಸರಿಯಲ್ಲ ಎಂದು ಅವರ ಆಪ್ತರು ಮತ್ತು ವಿವಿಧ ಮಠಾಧೀಶರು ಮಾಡಿದ ಮನವಿ ಹಿನ್ನೆಲೆಯಲ್ಲಿ ರಾಜಣ್ಣ ಅವರು ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಅತ್ಯಂತ ಸಂಕಷ್ಟ ಕಾಲದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬೆಂಗಾವಲಾಗಿ ನಿಂತಿದ್ದ ರಾಜಣ್ಣ ಅವರನ್ನು ಏಕಾಏಕಿ ಸಂಪುಟದಿಂದ ವಜಾ ಗೊಳಿಸಿರುವುದು ಸರಿಯಲ್ಲ ಕನಿಷ್ಠ ಅವರಿಂದ ಒಂದು ಸ್ಪಷ್ಟನೆಯನ್ನು ಕೇಳದೆ ತೀರ್ಮಾನ ಕೈಗೊಂಡಿರುವುದರಿಂದ ಸಿದ್ದರಾಮಯ್ಯ ಅವರು ತಮ್ಮ ಅಪ್ತರನ್ನೇ ರಕ್ಷಿಸಲು ಸಾಧ್ಯವಾಗಿಲ್ಲ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ ಈ ಹಿನ್ನೆಲೆಯಲ್ಲಿ ಅವರನ್ನು ಆದಷ್ಟು ಶೀಘ್ರ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವುದು ಸೂಕ್ತ ಎಂದು ಈ ಸಭೆಯಲ್ಲಿ ಬಹುತೇಕರು ಅಭಿಪ್ರಾಯ ಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೇ ಖುದ್ದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಈ ಕುರಿತಂತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ ಮುಂದಿನ ವಾರದಲ್ಲಿ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ