ಬೆಂಗಳೂರು,ಜು.6:
ರಾಜ್ಯದಲ್ಲಿ ಮಾರಣಾಂತಿಕ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸುವ ಮೂಲಕ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಸಲಹೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಏಳೆಂಟು ಸಾವಿರ ಮಂದಿ ಡೆಂಗ್ಯೂ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಳೆಂಟು ಮಂದಿ ಮೃತಪಟ್ಟಿದ್ದಾರೆ.ಇದರ ಜೊತೆಯಲ್ಲಿ ಝೀಕಾ ವೈರಸ್ ಕೂಡ ಕಾಣಿಸಿಕೊಂಡಿದೆ ಈ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಣೆ ಮಾಡಬೇಕು ಎಂದರು.
ಸದ್ಯದ ಪರಿಸ್ಥಿತಿ ನಿರ್ವಹಣೆ ಮಾಡಲು ವಿಶೇಷ ಕಾರ್ಯಪಡೆಯನ್ನು ರಚಿಸಬೇಕು. ವಿವಿಧ ಇಲಾಖೆಗಳು ಸಮನ್ವಯತೆಯಿಂದ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಲಹೆ ಮಾಡಿದರು.
ಡೆಂಗ್ಯೂಸೋಂಕಿಗೆ ನಿಖರವಾದಂತಹ ಚಿಕಿತ್ಸೆ ಇಲ್ಲ. ಈ ರೋಗಲಕ್ಷಣಗಳನ್ನು ಆಧರಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಜ್ವರ, ತಲೆನೋವು, ಸುಸ್ತುಗಳಿಗೆ ಆಯಾ ಪರಿಹಾರದ ಚಿಕಿತ್ಸೆ ನೀಡಲಾಗುತ್ತಿದೆಯೇ ಹೊರತು, ಸೋಂಕಿಗೆ ನಿಖರವಾದ ಚಿಕಿತ್ಸೆ ಇಲ್ಲ. ಹೀಗಾಗಿ ನಿಯಂತ್ರಣವೇ ಸೂಕ್ತ ಮಾರ್ಗ ಎಂದು ಹೇಳಿದರು.
ಇದೊಂದುಆರೋಗ್ಯ ತುರ್ತು ಪರಿಸ್ಥಿತಿಯಾಗಿದೆ. ಹೀಗಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕೋವಿಡ್ ಸಂದರ್ಭದಲ್ಲಿ ಅನುಸರಿಸಿದಂತೆ ಗರಿಷ್ಠ ಚಿಕಿತ್ಸೆಯ ಮಿತಿಯನ್ನು ನಿಗದಿ ಮಾಡಿ ಡೆಂಗ್ಯೂ ಗೂಉಚಿತವಾದ ಚಿಕಿತ್ಸೆ ನೀಡಬೇಕು. ಪ್ರತ್ಯೇಕವಾದ ವಾರ್ ರೂಂ ಅನ್ನು ಸ್ಥಾಪಿಸಬೇಕು ಎಂದು ಸಲಹೆ ಮಾಡಿದರು.
ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ತೊಂದರೆಗೀಡಾಗಿದ್ದರು. ಈಗ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳ ಪ್ರಮಾಣ ಇದೆ. ಹೀಗಾಗಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ಪರಿಸ್ಥಿತಿ ನಿಭಾಯಿಸಲು ಸಾಧ್ಯ.ಸೊಳ್ಳೆಗಳ ಹಾವಳಿಯಿಂದ ಮಕ್ಕಳನ್ನು ರಕ್ಷಿಸಲು ಲಭ್ಯವಿರುವ ವ್ಯವಸ್ಥೆಗಳನ್ನು ಪಾಲಿಸಬೇಕು. ಶಾಲಾ-ಕಾಲೇಜುಗಳಲ್ಲಿ, ಮಕ್ಕಳಲ್ಲಿ ಜಾಗೃತಿ ಜಾಥಾ ಮೂಡಿಸಬೇಕು ಎಂದು ಹೇಳಿದರು.
Previous ArticleOmeletನಲ್ಲಿ ಕಲ್ಲಿದ್ದರೆ ಏನಾಯ್ತು.?
Next Article CM ಮತ್ತು DCM ಬದಲಾವಣೆ ಚರ್ಚೆಯಲ್ಲಿ ಇವರಿಲ್ಲವಂತೆ.