ಬೆಂಗಳೂರು,ಆ.2-
ರಾಜಧಾನಿ ಮಹಾನಗರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರೂಪಿಸಿರುವ ಮೆಟ್ರೋ ರೈಲು ವ್ಯವಸ್ಥೆ ಹಲವರಿಗೆ ಹಲವಾರು ರೀತಿಯ ಅನುಕೂಲವಾಗಿದೆ.
ಇದೀಗ ಈ ವ್ಯವಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಮಾನವನ ಅಂಗಾಂಗ ಸಾಗಾಣಿಕೆ ಮಾಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ.
ವೈದೇಹಿ ಆಸ್ಪತ್ರೆಯಿಂದ ಆರ್.ಆರ್. ನಗರದ ಸ್ಪರ್ಶ ಆಸ್ಪತ್ರೆಗೆ ಅಂಗಾಂಗವನ್ನು ತಲುಪಿಸಲು ಮೆಟ್ರೋವನ್ನು ಬಳಸಲಾಯಿತು.ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಯಿಂದ ಆರ್.ಆರ್. ನಗರದ ಸ್ಪರ್ಶ ಆಸ್ಪತ್ರೆಗೆ ಸುಮಾರು 30 ಕಿ.ಮೀ ದೂರವಿದೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮತ್ತು ಇತರ ತೊಂದರೆಗಳಿಂದ ಸಮಯ ವ್ಯರ್ಥವಾಗುತ್ತದೆ ಎಂದು ಆಲೋಚಿಸಿ, ಮೆಟ್ರೋದಲ್ಲಿ ಮಾನವ ಅಂಗಾಗ ಸಾಗಿಸಲಾಯಿತು.
ಕರ್ನಾಟಕದಲ್ಲಿ ಅಂಗಾಂಗ ಸಾಗಣೆಗೆ ಮೆಟ್ರೋ ರೈಲು ವ್ಯವಸ್ಥೆಯನ್ನು ಬಳಸಿದ್ದು ಇದೇ ಮೊದಲು. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಹಕಾರದಿಂದ ಸಾಗಿಸಲು ಸಹಕಾರಿಯಾಗಿದೆ. ಇನ್ನು ರಸ್ತೆಯಲ್ಲಿ ಅಂಗಾಂಗವನ್ನು ಸಾಗಿಸಲು ತಡವಾಗುತ್ತದೆ ಎಂಬ ಕಾರಣಕ್ಕೆ ಮೆಟ್ರೋ ಸಾರಿಗೆಯನ್ನು ಬಳಸಲಾಯಿತು ಎಂದು ತಿಳಿಸಿದ್ದಾರೆ.
ಅಂಗಾಂಗ ಕಸಿಗೆ ಒಂದು ನಿರ್ದಿಷ್ಟ ಸಮಯವಿರುತ್ತದೆ. ಆ ಸಮಯದ ಒಳಗೆ ಅಂಗಾಂಗವನ್ನು ತೆಗೆದುಕೊಂಡು ಬೇರೆಯವರಿಗೆ ಹಾಕಬೇಕು. ಮೃತಪಟ್ಟ ವ್ಯಕ್ತಿ ಮುಂಚೆಯೇ ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದ್ದರೆ ಮಾತ್ರ ಇದು ಸಾಧ್ಯ. ಹೀಗಾಗಿ ವೈದ್ಯರು ಮೆಟ್ರೋದಲ್ಲಿ ಅಂಗಾಂಗ ಸಾಗಿಸುವುದೇ ಸರಿ ಎಂದು ನಿರ್ಣಯಿಸಿ, ಇತಿಹಾಸ ನಿರ್ಮಿಸಿದ್ದಾರೆ.
ಆಗಸ್ಟ್ 1, 2025 ರಂದು ರಾತ್ರಿ 8:38ಕ್ಕೆ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಯಕೃತ್ತನ್ನು ವೈದ್ಯರು ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿ ಆಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ಸಾಗಿಸಿದರು. ನಂತರ ಮೆಟ್ರೋ ರೈಲಿನ ಮೂಲಕ ರಾಜರಾಜೇಶ್ವರಿ ನಗರದ ಆಸ್ಪತ್ರೆಗೆ ತಲುಪಿಸಲಾಯಿತು. ಈ ಕಾರ್ಯವು ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ ಜಂಟಿ ಕಾರ್ಯವಿಧಾನ ಆದೇಶದ ಅಡಿಯಲ್ಲಿ ನಡೆಯಿತು. ಇದು ಮೆಟ್ರೋ ರೈಲಿನ ಮೂಲಕ ಅಂಗಾಂಗ ಸಾಗಿಸಿದ ದೇಶದ ಎರಡನೇ ಸಾಧನೆಯಾಗಿದೆ.
ವೈದ್ಯರ ತಂಡವು ಯಕೃತ್ತನ್ನು ತೆಗೆದುಕೊಂಡು ರಾತ್ರಿ 8:38ಕ್ಕೆ ವೈದೇಹಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಹೊರಟಿತು. ಅವರು ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದರು. ಅಲ್ಲಿ ಸಹಾಯಕ ಭದ್ರತಾ ಅಧಿಕಾರಿ ಮತ್ತು ಮೆಟ್ರೋ ಸಿಬ್ಬಂದಿ ತಂಡವು ಅವರನ್ನು ಸ್ವಾಗತಿಸಿತು. ದಾಖಲೆಗಳನ್ನು ಪರಿಶೀಲಿಸಿ, ಭದ್ರತಾ ತಪಾಸಣೆ ಮಾಡಿದರು.
ರಾತ್ರಿ 8:42ಕ್ಕೆ ಯಕೃತ್ತನ್ನು ಹೊತ್ತ ಮೆಟ್ರೋ ರೈಲು ವೈಟ್‌ಫೀಲ್ಡ್ ನಿಲ್ದಾಣದಿಂದ ಹೊರಟಿತು. ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಮತ್ತೊಬ್ಬ ಭದ್ರತಾಧಿಕಾರಿ ಮತ್ತು ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿದರು. ಕಾಯುತ್ತಿದ್ದ ಆಂಬ್ಯುಲೆನ್ಸ್‌ಗೆ ಯಕೃತ್ತನ್ನು ವರ್ಗಾಯಿಸಲು ಸಹಾಯ ಮಾಡಿದರು. ಶಸ್ತ್ರಚಿಕಿತ್ಸೆಗೆ ಬೇಕಾದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಲಾಯಿತು.
ಈ ಜೀವ ಉಳಿಸುವ ಕಾರ್ಯದಲ್ಲಿ ಸಹಾಯ ಮಾಡಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡ್‌ಗಳು ಮತ್ತು ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಧನ್ಯವಾದಗಳನ್ನು ತಿಳಿಸಿದರು. “ಇದು ಮೆಟ್ರೋ ರೈಲು ಮೂಲಕ ಅಂಗಾಂಗ ಸಾಗಣೆ ನಡೆಸಿದ ದೇಶದ ಎರಡನೇ ಸಾಧನೆಯಾಗಿದೆ” ಎಂದು ಅಧಿಕಾರಿಗಳು ಹೇಳಿದರು.
Previous Articleಜೀವಿತಾವಧಿವರೆಗೆ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ !
Next Article ಧರ್ಮಸ್ಥಳದಲ್ಲಿ ಮತ್ತೊಂದು ಶವ ಹೂತುಹಾಕಲಾಗಿದೆ !