ಬೆಂಗಳೂರು,ಫೆ.4-
ಈತ ಅಂತಿಂಥಾ ಕಳ್ಳ ಅಲ್ಲ.ಮನೆಗಳ್ಳತನ ಮಾಡುತ್ತಿದ್ದ ಈತ ಸಿನಿಮಾ ನಟಿ ಜೊತೆಗೆ ನಂಟು ಹೊಂದಿದ್ದಾನೆ.ಅಷ್ಟೇ ಅಲ್ಲ ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ .
ಇದರಿಂದ ಗಳಿಸಿದ ಹಣದಿಂದ ತನ್ನ ಸ್ನೇಹಿತೆಗೆ ಬರೋಬ್ಬರಿ 3 ಕೋಟಿ ಮೌಲ್ಯದ ಮನೆ ಕಟ್ಟಿಸಿಕೊಟ್ಟಿದ್ದಾನೆ.ಈ ಖತರ್ನಾಕ್ ಖದೀಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ
ಈತ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಕಳವು ಆರೋಪದಲ್ಲಿ ಈತನನ್ನು ಬಂಧಿಸಿರುವ ಪೊಲೀಸರು ಈತನಿಂದ
12.25 ಲಕ್ಷ ಮೌಲ್ಯದ 181 ಗ್ರಾಂ ಚಿನ್ನದ ಗಟ್ಟಿ, 333 ಗ್ರಾಂ ಬೆಳ್ಳಿಯ ವಸ್ತುಗಳು, ಚಿನ್ನದ ಗಟ್ಟಿಯನ್ನು ಮಾಡಲು ಉಪಯೋಗಿಸುತ್ತಿದ್ದ ಒಂದು ಫೈರ್ ಗನ್,
ಮೂಸ್ ಜಪ್ತಿ ಮಾಡಿಕೊಂಡಿದ್ದಾರೆ
ಈತನ ಮತ್ತೊಬ್ಬ ಖತರ್ನಾಕ್ ಸಹಚರ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಬಂಧಿತ ಆರೋಪಿಯು ಪ್ರಖ್ಯಾತ ನಟಿಯ ಜೊತೆಗೂ ನಂಟು ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.
ಆರೋಪಿ ಪಂಚಾಕ್ಷರಿ ಸ್ವಾಮಿಯ ತಂದೆ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರು, ಅವರು ಅಕಾಲಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಆತನ ತಾಯಿಗೆ ಸಿಕ್ಕಿತ್ತು.
ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿ ಮಗುವಿದೆ.ಚಿಕ್ಕದಾದ ಮನೆಯಲ್ಲಿ ವಾಸವಾಗಿದ್ದ ಆತನ ಮನೆ ಕೂಡ ಆರೋಪಿ ಪಂಚಾಕ್ಷರಿ ಸ್ವಾಮಿಯ ತಾಯಿಯ ಹೆಸರಿನಲ್ಲಿದೆ. ಈ ಮನೆ ಮೇಲೆ ಸಾಲ ಇದ್ದು, ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್ನಿಂದ ನೋಟಿಸ್ ಬಂದಿದೆ. ವಾಸದ ಮನೆ ಸದ್ಯ ಹರಾಜಿಗೆ ಬಂದಿದೆ.
ಪಂಚಾಕ್ಷರಿ ಸ್ವಾಮಿ 2003ರಲ್ಲಿ ಕಳ್ಳತನಕ್ಕೆ ಇಳಿದಿದ್ದ.ಆಗ ಆತ ಅಪ್ರಾಪ್ತ.2009 ರಿಂದ ವೃತ್ತಿಪರ ಕಳ್ಳನಾಗಿ ಪರಿವರ್ತನೆಯಾಗಿದ್ದ,ಮನೆ ಕಳ್ಳತನ ಮಾಡಿ ಕೋಟಿ ಕೋಟಿ ಹಣ ಗಳಿಸಿದ್ದ ಆತ 2014-15 ರಲ್ಲಿ ಪ್ರಖ್ಯಾತ ನಟಿ ಜೊತೆಗೆ ಸಂಪರ್ಕದಲ್ಲಿದ್ದೆ ಎಂಬುವುದಾಗಿ ಹೇಳಿಕೊಂಡಿದ್ದಾನೆ.
ನಟಿಗಾಗಿ 2016 ರಲ್ಲಿ ಕೊಲ್ಕತ್ತದಲ್ಲಿ 3 ಕೋಟಿ ರೂ. ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟಿದ್ದಾನೆ. ಅಲ್ಲದೇ, ಆಕೆಯ ಹುಟ್ಟು ಹಬ್ಬಕ್ಕೆ 22 ಲಕ್ಷ ರೂ. ಮೌಲ್ಯದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದಾನೆ.
2016ರಲ್ಲಿ ಗುಜರಾತ್ ಪೊಲೀಸರು ಕಳ್ಳತನ ಆರೋಪದಲ್ಲಿ ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು.
6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಪಂಚಾಕ್ಷರಿ ಸ್ವಾಮಿ ಹೊರಬಂದು ಮತ್ತೆ ಕಳ್ಳತನ ಮಾಡಲು ಆರಂಭಿಸಿದ್ದಾನೆ.
ಈ ನಡುವೆ ಮಹಾರಾಷ್ಟ್ರ ಪೊಲೀಸರು ಕಳ್ಳತನ ಪಂಚಾಕ್ಷರಿ ಸ್ವಾಮಿಯನ್ನು ಬಂಧಿಸಿ ಜೈಲಿಗಟ್ಟಿದ್ದರು
2024 ರಲ್ಲಿ ಜೈಲಿನಿಂದ ಬಿಡುಗಡೆಯಾದ ಈತ ಬೆಂಗಳೂರಿಗೆ ಆಗಮಿಸಿ ಇಲ್ಲಿ ಕಳ್ಳತನ ಮಾಡಲು ಶುರುಮಾಡಿದ್ದಾನೆ.ಆರೋಪಿ ಪಂಚಾಕ್ಷರಿ ಸ್ವಾಮಿ ಕಳೆದ ಜ. 9 ರಂದು ಮಡಿವಾಳದಲ್ಲಿ ಮನೆಕಳ್ಳತನ ಮಾಡಿ 410 ಗ್ರಾಂ ಚಿನ್ನ, ಮತ್ತು ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಅಯಾಮಗಳಲ್ಲಿ ತನಿಖೆ ನಡೆಸಿ ಮಡಿವಾಳ ಠಾಣಾ ವ್ಯಾಪ್ತಿಯ ಮಾರುಕಟ್ಟೆಯ ಬಳಿ
ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನ ಮೇಲೆ 180 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಚಿನ್ನಾಭರಣ ಕುದಿಯುತ್ತಿದ್ದ ಪಂಚಾಕ್ಷರಿ ಸ್ವಾಮಿ ಚಿನ್ನ ಕರಗಿಸಿ ಚಿನ್ನದ ಗಟ್ಟಿಯಾಗಿ ಮಾರ್ಪಡಿಸಿ, ಹಾಗೂ ಬೆಳ್ಳಿಯ ವಸ್ತುಗಳನ್ನು ತನ್ನ ಸ್ವಂತ ಊರಾದ ಮಹರಾಷ್ಟ್ರದ ಸೊಲ್ಲಾಪುರದ ಮನೆಯಲ್ಲಿ ಇಟ್ಟು ಅಲ್ಲಿಂದ ವಿಲೇವಾರಿ ಮಾಡುತ್ತಿದ್ದ ಎಂದು ಹೇಳಿದರು.
ಆರೋಪಿ ಪಂಚಾಕ್ಷರಿ ಸ್ವಾಮಿ ಮನೆ ಕಳ್ಳತನದ ಬಳಿಕ ರಸ್ತೆಯಲ್ಲಿ ಬಟ್ಟೆ ಬದಲಿಸುತ್ತಿದ್ದನು.ಈತ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.